
ಈ ಬಗ್ಗೆ ಮಠದ ಪುರೋಹಿತರಾದ ನಂದಕಿಶೋರಾಚಾರ್ಯರು ಮಾತನಾಡಿ, ತದನಂತರ ಡಾ.ವೆಂಕಟನರಸಿಂಹಾಚಾರ್ಯರಿಂದ "ಶ್ರೀ ರಾಘವೇಂದ್ರ ವಿಜಯ" ಪ್ರವಚನದ ಮಂಗಳ ಕಾರ್ಯಕ್ರಮದೊಂದಿಗೆ ಸ್ವರ್ಣ ಸಿಂಹಾಸನದಲ್ಲಿ ಶ್ರೀ ಪ್ರಹ್ಲಾದರಾಜರ ಮೂರ್ತಿಯನ್ನು ಇರಿಸಿ ಶ್ರೀಮಠದಿಂದ ಗುರು ಪಾದಪೂಜೆ, ಕನಕಾಭಿಷೇಕ ಮತ್ತು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವು ನೆರವೇರಿತು.
ಸೇವಾ ಕರ್ತೃಗಳಿಗೆ ಮತ್ತು ಭಕ್ತರಿಗೆ ಸಂಕಲ್ಪವನ್ನು ಮಾಡಿಸಿ ಶೇಷವಸ್ತ್ರ ಶ್ರೀ ಗುರು ರಾಯರ ಪಾದುಕೆ, ಫಲ ಮಂತ್ರಾಕ್ಷತೆ ಪ್ರಸಾದ ರೂಪವಾಗಿ ಕೊಡಲಾಯಿತು. ಇದೇ ಸಂದರ್ಭದಲ್ಲಿ ರಾಯರ ಸನ್ನಿಧಿಗೆ ಆಗಮಿಸಿದ ಸುಮಾರು 20,000ಕ್ಕೂ ಮಿಗಿಲಾಗಿ ಭಕ್ತರಿಗೆ ವಿಶೇಷವಾಗಿ ಅನ್ನಸಂತರ್ಪಣೆಯ ಪ್ರಸಾದ ಕಾರ್ಯಕ್ರಮವು ಸ್ವಯಂಸೇವಕರ ಮತ್ತು ಸಿಬ್ಬಂದಿಗಳ ಸಹಕಾರದಿಂದ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನೆರವೇರಿತು. ಸೇವಾ ಕರ್ತೃಗಳು, ಭಕ್ತರು, ಗಣ್ಯರು, ತೀರ್ಥ ಪ್ರಸಾದ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.