ಕೋಲ್ಕತ್ತಾ: ಇಲ್ಲಿನ ಪ್ರಸಿದ್ಧ ಚೋರ್ಬಾಗನ್ ದುರ್ಗಾಪೂಜಾ ಪೆಂಡಾಲ್ನಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 13 ಮಹಿಳೆಯರು ಮತ್ತು ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 19 ಭಕ್ತರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದುರ್ಗಾಪೂಜಾ ಉತ್ಸವದ ಏಳನೇ ದಿನವಾದ ಸಪ್ತಮಿಯಂದು ಸಂಜೆ ಸುಮಾರು 7:40ಕ್ಕೆ ಈ ದುರಂತ ಸಂಭವಿಸಿದೆ. ಆ ಸಮಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಕಾರಣ ಜನರು ಛತ್ರಿ ಹಿಡಿದುಕೊಂಡು ಏಕಾಏಕಿ ಪೆಂಡಾಲ್ ಒಳಗೆ ನುಗ್ಗಲು ಯತ್ನಿಸಿದಾಗ ಕಾಲ್ತುಳಿತ ಉಂಟಾಗಿದೆ ಎನ್ನಲಾಗಿದೆ.
ವಿಡಿಯೋದಲ್ಲಿ ಸೆರೆಯಾದ ಆಕ್ರಂದನ
ಘಟನೆಯ ಭೀಕರತೆಯನ್ನು ಬಿಂಬಿಸುವ ವಿಡಿಯೋ ತುಣುಕುಗಳು ಹೊರಬಂದಿವೆ. 49 ಸೆಕೆಂಡುಗಳ ವಿಡಿಯೋದಲ್ಲಿ, ಕಿರಿದಾದ ಮತ್ತು ಕಡಿಮೆ ಎತ್ತರದ ಚಾವಣಿ ಹೊಂದಿದ್ದ ಬ್ಯಾರಿಕೇಡ್ ಹಾದಿಯಲ್ಲಿ ನೂರಾರು ಜನರು ಸಿಲುಕಿಕೊಂಡಿರುವುದು ಕಂಡುಬಂದಿದೆ. ಎಳ್ಳಷ್ಟೂ ಜಾಗವಿಲ್ಲದೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರು ಮತ್ತು ಮಕ್ಕಳು ರಕ್ಷಣೆಗಾಗಿ ಅಂಗಲಾಚುತ್ತಿರುವ ದೃಶ್ಯಗಳು ಎದೆಕಲಕುವಂತಿವೆ.
https://twitter.com/ndtv/status/2111726511770542105
ಆಯೋಜಕರ ಧ್ವನಿವರ್ಧಕ ಘೋಷಣೆ ಕಾರಣ?
ಕೋಲ್ಕತ್ತಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಸ್ಥಳದಲ್ಲಿದ್ದ ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ ಪೂಜಾ ಆಯೋಜಕರು ಧ್ವನಿವರ್ಧಕದಲ್ಲಿ (ಲೌಡ್ಸ್ಪೀಕರ್) ಮಾಡಿದ ಪ್ರಕಟಣೆಯೊಂದು ಜನರ ನೂಕುನುಗ್ಗಲಿಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ. ಆದರೆ ಧ್ವನಿವರ್ಧಕದಲ್ಲಿ ಏನು ಪ್ರಕಟಿಸಲಾಗಿತ್ತು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಏಳು ಜನರ ಬಂಧನ
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತವಾಗಿ (ಸುಮೊಟೊ) ಪ್ರಕರಣ ದಾಖಲಿಸಿಕೊಂಡಿದ್ದು, ನರಹತ್ಯೆ ಆರೋಪದಡಿ ಏಳು ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಚೋರ್ಬಾಗನ್ ದುರ್ಗಾಪೂಜಾ ಸಮಿತಿಯ ಕಾರ್ಯದರ್ಶಿ ರಾಜ್ ಕುಮಾರ್ ಸೇವ್ದಾ, ಉಪಾಧ್ಯಕ್ಷ ಶಾಂತನು ದುಬೆ, ಬಿದಿರಿನ ರಚನೆ ನಿರ್ಮಿಸಿದ ಬಿಪ್ಲಬ್ ಮುಖರ್ಜಿ, ಜನಸಂದಣಿ ನಿಯಂತ್ರಣ ಉಸ್ತುವಾರಿಗಳಾದ ಕೌಶಿಕ್ ಸಾಹಾ, ಪಿಂಟು ಡೇ ಹಾಗೂ ಖಾಸಗಿ ಭದ್ರತಾ ಉಸ್ತುವಾರಿಗಳಾದ ಸುಮನ್ ಚಕ್ರವರ್ತಿ ಮತ್ತು ರಾಜೇಶ್ ಪಾಲ್ ಸೇರಿದ್ದಾರೆ.
ದುರಂತ ಸಂಭವಿಸಿದ ಸ್ಥಳದಲ್ಲಿ ಭಕ್ತರ ಪಾದರಕ್ಷೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಪೊಲೀಸರು ಮತ್ತು ಸ್ಥಳೀಯ ಆಡಳಿತ ಪರಿಹಾರ ಕಾರ್ಯಾಚರಣೆ ಮುಂದುವರಿಸಿದೆ.