ದಕ್ಷಿಣ ಕನ್ನಡ: ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಶಾಸಕಿ ಹಾಗೂ ಚಾಲಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಧಿಕೃತ ಕಾರ್ಯಕ್ರಮಗಳ ನಿಮಿತ್ತ ಸಂಚರಿಸುತ್ತಿದ್ದ ವೇಳೆ, ಸುಳ್ಯ ತಾಲೂಕಿನ ಕರಿಕ್ಕಳ ಹಾಗೂ ನಿಂತಿಕಲ್ ಮಾರ್ಗ ಮಧ್ಯೆ ಈ ರಸ್ತೆ ಅಪಘಾತ ಸಂಭವಿಸಿದೆ.
ಸಡನ್ ಬ್ರೇಕ್ನಿಂದಾಗಿ ಹಿಂಬದಿಯಿಂದ ಡಿಕ್ಕಿ:
ಶಾಸಕಿ ಭಾಗೀರಥಿ ಮುರುಳ್ಯ ಅವರ ವಾಹನ ಕರಿಕ್ಕಳ-ನಿಂತಿಕಲ್ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಮುಂಭಾಗದಲ್ಲಿ ತೆರಳುತ್ತಿದ್ದ ಕಾರಿನ ಚಾಲಕ ಅನಿರೀಕ್ಷಿತವಾಗಿ ಸಡನ್ ಬ್ರೇಕ್ ಹಾಕಿದ್ದಾನೆ. ಪರಿಣಾಮವಾಗಿ, ಹಿಂಬದಿಯಲ್ಲಿದ್ದ ಶಾಸಕರ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಮುಂದಿನ ವಾಹನಕ್ಕೆ ಹಿಂಬದಿಯಿಂದ ಬಲವಾಗಿ ಡಿಕ್ಕಿಯಾಗಿದೆ.
ಡಿಕ್ಕಿಯ ತೀವ್ರತೆಗೆ ಶಾಸಕಿಯವರ ಕಾರಿನ ಮುಂಭಾಗ ಜಖಂಗೊಂಡಿದೆ. ಆದಾಗ್ಯೂ, ವಾಹನದಲ್ಲಿದ್ದ ಸುರಕ್ಷತಾ ಕ್ರಮಗಳಿಂದಾಗಿ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಅವರ ಕಾರು ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು, ಸ್ಥಳೀಯರು ಹಾಗೂ ಬೆಂಬಲಿಗರು ನಿರಾಳರಾಗಿದ್ದಾರೆ. ಅಪಘಾತದ ನಂತರ ಶಾಸಕರು ಮತ್ತೊಂದು ವಾಹನದಲ್ಲಿ ತಮ್ಮ ನಿಗದಿತ ಕಾರ್ಯಕ್ರಮಗಳಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.