ಚಂದ್ರವಳ್ಳಿ ನ್ಯೂಸ್, ಮೈಸೂರು:
ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿರುವ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಬಿಜೆಪಿ ಹಿರಿಯ ಶಾಸಕ ರಮೇಶ್ ಜಾರಕಿಹೊಳಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಟಿಕೆ ಲೇಔಟ್ನಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ ರಮೇಶ್ ಜಾರಕಿಹೊಳಿ, ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದರು. ಈ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಲು ರಮೇಶ್ ಜಾರಕಿಹೊಳಿ ಆರಂಭದಲ್ಲಿ ನಿರಾಕರಿಸಿದರು. ನಂತರ ಕಾರು ಹತ್ತುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದು ಕೇವಲ ಸೌಹಾರ್ದಯುತ ಭೇಟಿಯಷ್ಟೇ, ಸುಮ್ಮನೆ ಭೇಟಿಯಾಗಿದ್ದೆವು. ಸಿದ್ದರಾಮಯ್ಯ ಅವರು ಯಾವತ್ತೂ ನಮ್ಮ ನಾಯಕರು" ಎಂದು ಹೇಳಿ ಅಲ್ಲಿಂದ ತೆರಳಿದರು.
ಬೇರೆ ಅರ್ಥ ಕಲ್ಪಿಸುವುದು ಬೇಡ - ಸಿದ್ದರಾಮಯ್ಯ ಸ್ಪಷ್ಟನೆ:
ರಮೇಶ್ ಜಾರಕಿಹೊಳಿ ಅವರ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಸುಮ್ಮನೆ ಬಂದಿದ್ದರು, ಕುಶಲೋಪರಿ ಮಾತನಾಡಿದ್ದೇವೆ ಅಷ್ಟೇ. ಸಚಿವ ನರೇಂದ್ರಸ್ವಾಮಿ ಸಹ ಬಂದಿದ್ದರು. ಈ ಭೇಟಿಗೆ ರಾಜಕೀಯವಾಗಿ ಬೇರೆ ಯಾವುದೇ ಅರ್ಥ ಕಲ್ಪಿಸುವುದು ಬೇಡ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ ಹೋದರು" ಎಂದು ತಿಳಿಸಿದರು.
ಇದೇ ವೇಳೆ, ನ್ಯಾಯಾಲಯದಿಂದ ಇಂಜಂಕ್ಷನ್ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ತಾವೀಗಲೇ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜಕೀಯವಾಗಿ ಭಿನ್ನ ಪಕ್ಷಗಳಲ್ಲಿದ್ದರೂ ಪ್ರಮುಖ ನಾಯಕರು ದಿಢೀರ್ ಭೇಟಿಯಾಗಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.