ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಸುವರ್ಣ ಅಧ್ಯಾಯ ಬರೆಯಲ್ಪಟ್ಟಿದೆ. ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಸತತವಾಗಿ ಭೇದಿಸುತ್ತಾ ಬಂದ ‘ಜೈಂಟ್ ಕಿಲ್ಲರ್’ ಖ್ಯಾತಿಯ ಸುವೇಂದು ಅಧಿಕಾರಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಂಗಾಳದ ನೆಲದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಗಳಿಸಿದ ಬೆನ್ನಲ್ಲೇ, ಇಂದು ಕೋಲ್ಕತ್ತಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಸುವೇಂದು ಅಧಿಕಾರಿ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುವೇಂದು ಅವರ ಹೆಸರನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಎಲ್ಲ ಕುತೂಹಲಕ್ಕೆ ತೆರೆ ಎಳೆದರು.
ಮಮತಾ ಕೋಟೆಯಲ್ಲಿ ಸುವೇಂದು ಅಬ್ಬರ ಸುವೇಂದು ಅಧಿಕಾರಿ ಅವರಿಗೆ ಈ ಪಟ್ಟ ಸಿಗಲು ಅವರು ಸಾಧಿಸಿದ ಅಸಾಧಾರಣ ಗೆಲುವುಗಳೇ ಕಾರಣ. ಕಳೆದ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ದೇಶದ ಗಮನ ಸೆಳೆದಿದ್ದ ಸುವೇಂದು, ಈ ಬಾರಿ ಮಮತಾ ಅವರ ಸ್ವಕ್ಷೇತ್ರವಾದ ಭವಾನಿಪುರದಲ್ಲಿಯೇ ಅವರನ್ನು ಎರಡನೇ ಬಾರಿಗೆ ಮಣ್ಣುಮುಕ್ಕಿಸುವ ಮೂಲಕ ತಮ್ಮ ‘ಜೈಂಟ್ ಕಿಲ್ಲರ್’ ಪಟ್ಟವನ್ನು ಮತ್ತಷ್ಟು ಭದ್ರಪಡಿಸಿಕೊಂಡರು.
ನಾಳೆ ಐತಿಹಾಸಿಕ ಪ್ರಮಾಣವಚನ ನಾಳೆ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.
ಇದೇ ವೇಳೆ ಹಿರಿಯ ನಾಯಕಿ ಮತ್ತು ನಟಿ ರೂಪಾ ಗಂಗೂಲಿ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟನಾಗಿದ್ದ ಸುವೇಂದು ಅಧಿಕಾರಿ, ಈಗ ‘ಸೋನಾರ್ ಬಾಂಗ್ಲಾ’ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸಜ್ಜಾಗಿದ್ದಾರೆ.