LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

2028 ರಿಂದ ಆದಾಯ ತೆರಿಗೆ ಜಾರಿಗೆ ತರಲಿರುವ ಮೊದಲ ಗಲ್ಫ್ ದೇಶ ಓಮನ್

ಮಸ್ಕತ್ : 2028 ರಿಂದ ವೈಯಕ್ತಿಕ ಆದಾಯ ತೆರಿಗೆಯನ್ನು ಜಾರಿಗೆ ತಂದ ಮೊದಲ ಗಲ್ಫ್ ರಾಷ್ಟ್ರವಾಗಿ ಓಮನ್ ಹೊರಹೊಮ್ಮಲಿದೆ. ತೈಲ ಸಂಪದ್ಭರಿತ ಕೊಲ್ಲಿ ರಾಷ್ಟ್ರ ಓಮನ್‌ ಆದಾಯ ತೆರಿಗೆ ವಿಧಿಸಲು ಮುಂದಾಗಿದೆ. 2028ರಿಂದ ತೆರಿಗೆ ಪದ್ಧತಿ ಜಾರಿಗೆ ಬರಲಿದೆ. ವಾರ್ಷಿಕ 95 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಇರುವವರಿಗೆ ಶೇಕಡಾ 5 ರಷ್ಟು ಅಲ್ಪ ತೆರಿಗೆ ವಿಧಿಸಲಾಗುತ್ತದೆ. ತೈಲೇತರ ಆದಾಯ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಓಮನ್‌ ಮೊದಲ ಬಾರಿಗೆ ಆದಾಯ ತೆರಿಗೆ ವಿಧಿಸುತ್ತಿದೆ.

ಆದಾಯ ತೆರಿಗೆಯಿಂದ ದೂರವೇ ಉಳಿದಿದ್ದ ತೈಲ ಸಂಪದ್ಭರಿತ ಕೊಲ್ಲಿ ದೇಶಗಳೂ ಇದೀಗ ತೆರಿಗೆಯತ್ತ ಮುಖ ಮಾಡಿವೆ. ಓಮನ್‌ ತನ್ನ ನಾಗರಿಕರಿಂದ ಇನ್‌ಕಂ ಟ್ಯಾಕ್ಸ್‌ ವಸೂಲಿ ಮಾಡಲು ನಿರ್ಧರಿಸಿದೆ. ಈ ಮೂಲಕ ಆದಾಯಕ್ಕೆ ತೆರಿಗೆ ವಿಧಿಸುತ್ತಿರುವ ಮೊದಲ ಗಲ್ಫ್‌ ರಾಷ್ಟ್ರ ಎನಿಸಿಕೊಳ್ಳಲಿದೆ.

ಶೇ. 5ರಷ್ಟು ಅಲ್ಪ ತೆರಿಗೆಯನ್ನು ವಿಧಿಸಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ. 42,000 ರಿಯಾಲ್‌ಗಳು (109,000 ಡಾಲರ್‌) ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 95 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರಿಗೆ ಮಾತ್ರ ಈ ತೆರಿಗೆ ವಿಧಿಸಲಿದೆ.

ಇಡೀ ದೇಶದಲ್ಲಿ ವರ್ಷದಲ್ಲಿ ಇದಕ್ಕಿಂತ ಹೆಚ್ಚು ಆದಾಯ ಗಳಿಸುವವರ ಪ್ರಮಾಣ ಸರಿಸುಮಾರು ಶೇ. 1ರಷ್ಟು ಇದೆ. ಇವರಿಗೆ ಮಾತ್ರ ಇದು ಪರಿಣಾಮ ಬೀರುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಒಮಾನಿ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಓಮನ್ ಈ ನಿರ್ಧಾರಕ್ಕೆ ಬಂದಿರುವುದಕ್ಕೆ ಕಾರಣ ಇದೆ. ಹಲವು ಕೊಲ್ಲಿ ದೇಶಗಳು ತಮ್ಮ ಆದಾಯದ ಮೂಲವನ್ನು ವೈವಿಧ್ಯಗೊಳಿಸಿವೆ ಅಥವಾ ಭಿನ್ನ ಆದಾಯದ ಮೂಲಗಳ ಮೊರೆ ಹೋಗಿವೆ. ಕೆಲವು ದೇಶಗಳು ಇದರಲ್ಲಿ ಯಶಸ್ವಿಯಾಗಿವೆ ಕೂಡ. ಈ ಮೂಲಕ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿವೆ.

ಇದೇ ಕಾರಣಕ್ಕೆ ಓಮನ್‌ ಕೂಡ ಆದಾಯ ತೆರಿಗೆ ವಿಧಿಸುವ ನಿರ್ಧಾರಕ್ಕೆ ಬಂದಿದೆ. ಸಾಮಾಜಿಕ ವೆಚ್ಚವನ್ನು ಮುಂದುವರಿಸುವುದರ ಜೊತೆ ಜೊತೆಗೇ ತೈಲ ಆದಾಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಆರ್ಥಿಕ ಸಚಿವ ಸೈಯದ್ ಬಿನ್ ಮೊಹಮ್ಮದ್ ಅಲ್-ಸಕ್ರಿ ಹೇಳಿದ್ದಾರೆ.

ಆರು ರಾಷ್ಟ್ರಗಳ ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ಯಾವುದೇ ಸದಸ್ಯರು ಆದಾಯ ತೆರಿಗೆಯನ್ನು ವಿಧಿಸುತ್ತಿಲ್ಲ. ಹೀಗಿರುವಾಗ ಓಮನ್‌ ಈ ನಿರ್ಧಾರಕ್ಕೆ ಬಂದಿರುವುದು ಈ ದೇಶಗಳೂ ಬದಲಾವಣೆಯ ನಿರ್ಧಾರಕ್ಕೆ ಬಂದಿರುವುದನ್ನು ಸೂಚಿಸುತ್ತದೆ.

ಈ ದೇಶಗಳ ಆದಾಯ ತೆರಿಗೆ ಮುಕ್ತ ನಿರ್ಧಾರದಿಂದಾಗಿ ಹೆಚ್ಚು ಸಂಭಾವನೆ ಪಡೆಯುವ ವಿದೇಶಿ ಕಾರ್ಮಿಕರು ಈ ಪ್ರದೇಶಗಳಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡ ಓಮನ್‌ ತೆರಿಗೆ ವಿಧಿಸುವ ನಿರ್ಧಾರಕ್ಕೆ ಬಂದಿದೆ.

ಹೆಚ್ಚಿನ ಜಿಸಿಸಿ ದೇಶಗಳ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ. ತೈಲ ಆದಾಯವೇ ಇದಕ್ಕೆ ಕಾರಣ. ಈ ವರ್ಷ ಸೌದಿ ಅರೇಬಿಯಾ ಮತ್ತು ಬಹ್ರೇನ್ ಮಾತ್ರ ಆದಾಯದ ಕೊರತೆಯನ್ನು ಎದುರಿಸುವ ನಿರೀಕ್ಷೆ ಇದೆ. ಮುಂದೊಂದು ದಿನ ತೈಲಗಳಿಗೆ ಜಾಗತಿಕ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಈ ರಾಜ್ಯಗಳಿಗೆ ಅಂತಿಮವಾಗಿ ಆದಾಯ ತೆರಿಗೆಗಳು ಬೇಕಾಗಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ.

ಹೀಗಾಗಿ ಈ ದೇಶಗಳು ಈಗಿನಿಂದಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸುತ್ತಿವೆ. ಕಳೆದ ವರ್ಷ ಓಮನ್‌ನ ಸರ್ಕಾರಿ ಕಂಪನಿಯ ಐಪಿಒ ತರುವ ಮೂಲಕ ಇಲ್ಲಿನ ಸುಲ್ತಾನರು 2 ಬಿಲಿಯನ್‌ ಡಾಲರ್‌ ಸಂಗ್ರಹಿಸಿದ್ದರು. ಇದೀಗ ಆದಾಯ ತೆರಿಗೆ ವಿಧಿಸುವ ನಿರ್ಧಾರಕ್ಕೆ ಬಂದಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026