
ಪಕ್ಷದ ರಾಜ್ಯದ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಸೇರಿದಂತೆ ಐದು ವಿಭಾಗಗಳ ನೂತನ ಅಧ್ಯಕ್ಷರು, ಎಲ್ಲಾ ವಿಧಾನಸಭೆ ಕ್ಷೇತ್ರಗಳ ನೂತನ ಅಧ್ಯಕ್ಷರ ಜತೆ ಸಚಿವರು ಸುದೀರ್ಘ ಮಾತುಕತೆ ನಡೆಸಿದರು.
ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪಕ್ಷದ ಘಟಕವನ್ನು ಪುನಾರಚನೆ ಮಾಡಲಾಗಿದ್ದು, ಎಲ್ಲಾ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದಾದ ನಂತರ ನಡೆದ ಮೊದಲ ಸಭೆ ಇದಾಗಿದೆ.
ವಾರ್ಡುವಾರು, ಮತಗಟ್ಟೆವಾರು ಸಂಘಟನೆ ಮಾಡುವ ಕೆಲ ಮಹತ್ವದ ಸೂಚನೆಗಳನ್ನು ಕೊಟ್ಟ ಕುಮಾರಸ್ವಾಮಿ ಅವರು; ನಗರದ ಎಲ್ಲಾ ಭಾಗಗಳಲ್ಲಿ ಪಕ್ಷದ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಎಲ್ಲಾ ಮುಖಂಡರು ಸಕ್ರಿಯವಾಗಿ ಕೆಲಸ ಮಾಡಬೇಕು. ಕೇಂದ್ರ ಕಚೇರಿ ನೀಡುವ ಸೂಚನೆಗಳ ಪ್ರಕಾರ ಎಲ್ಲಾ ವಿಭಾಗಗಳ ಅಧ್ಯಕ್ಷರು, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರುಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಎಂದು ಸೂಚಿಸಿದರು.

ಬೆಂಗಳೂರು ನಗರದಲ್ಲಿ ಎನ್ಡಿಎ ಅಧಿಕಾರಕ್ಕೆ ಬರಬೇಕು. ಈ ಸರ್ಕಾರದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ತೆರಿಗೆ, ದರ ಏರಿಕೆಯಿಂದ ಬಸವಳಿದಿದ್ದಾರೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ಜನತೆಯ ಸಹಜ ಆಯ್ಕೆಯಾಗಿದೆ. ಹೀಗಾಗಿ ಎಲ್ಲರೂ ಒಮ್ಮತವಾಗಿ ಪಕ್ಷ ಸಂಘಟಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಇದೇ ವೇಳೆ ನೂತನವಾಗಿ ವಿಭಾಗವಾರು ನೇಮಕಗೊಂಡಿರುವ ಅಧಿಕಾರಿಗಳಿಂದ ಪಕ್ಷದ ಸಂಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು; ಯಾರು ಮೈತ್ರಿ ಬಗ್ಗೆ ಮಾತನಾಡಬೇಡಿ. ಆ ಬಗ್ಗೆ ಪಕ್ಷದ ವರಿಷ್ಠರು ಚರ್ಚಿಸುತ್ತಾರೆ. ನಿಮ್ಮದೇನಿದ್ದರೂ ಸಂಘಟನೆ ಕೆಲಸ. ಅಷ್ಟನ್ನು ಮಾಡಿ. ಕಾರ್ಯಕರ್ತರು ಮತ್ತು ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಜ್ಜೆ ಇರಿಸಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸಭೆಯಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಜವರಾಯ ಗೌಡ, ಮಾಜಿ ಎಂಎಲ್ ಸಿ ಕೆ.ಎ. ತಿಪ್ಪೇಸ್ವಾಮಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಇ. ಕೃಷ್ಣಪ್ಪ, ಪ್ರಕಾಶ್, ಗೊಟ್ಟಿಗೆರೆ ಮಂಜುನಾಥ್, ಕೃಷ್ಣ, ತಿಮ್ಮೇಗೌಡ ಸೇರಿದಂತೆ ಅನೇಕ ಪ್ರಮುಖರು ಸಭೆಯಲ್ಲಿದ್ದರು.
ಈ ಸಂದರ್ಭದಲ್ಲಿ ಸಚಿವರು ಎಲ್ಲಾ 28 ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರಾಗಿ ನೇಮಕಗೊಂಡ ಮುಖಂಡರಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಿದರು.