ಅಂಬಿಕಾಪುರ (ಛತ್ತೀಸ್‌ಗಢ): ಕೌಟುಂಬಿಕ ಹಿಂಸಾಚಾರದ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಛತ್ತೀಸ್‌ಗಢ ರಾಜ್ಯದಲ್ಲಿ ನಡೆದಿದ್ದು, ಗರ್ಭಿಣಿ ಪತ್ನಿಯನ್ನೇ ಪತಿಯು ಕ್ರೂರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಂಬಿಕಾಪುರ ಸಮೀಪದ ಸಕರಿಯಾ ಗ್ರಾಮದಲ್ಲಿ ನಡೆದ ಈ ಘಟನೆ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
23 ವರ್ಷದ ಹೀರಾಬಾಯಿ ಮೃತ ಮಹಿಳೆ. ಆಕೆಯ ಪತಿ ಪ್ರದೀಪ್ ಅಗಾರಿಯಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಘಟನೆ ಬಳಿಕ ಆತ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ದಂಪತಿಗಳ ನಡುವೆ ಕಳೆದ ಕೆಲ ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವೈಷಮ್ಯ ತಾರಕಕ್ಕೇರಿ ಆರೋಪಿ ಪ್ರದೀಪ್ ಪತ್ನಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು ಶಂಕಿಸಲಾಗಿದೆ. ಮಹಿಳೆಯ ದೇಹದ ಮೇಲೆ ಗಂಭೀರ ಗಾಯಗಳ ಗುರುತುಗಳು ಪತ್ತೆಯಾಗಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಬಳಿಕ ತನ್ನ ಮೇಲಿನ ಅನುಮಾನ ತಪ್ಪಿಸಿಕೊಳ್ಳಲು ಆರೋಪಿ, ಪತ್ನಿಗೆ ಅಪಘಾತ ಸಂಭವಿಸಿದೆ ಎಂದು ನಾಟಕವಾಡಿದ್ದಾನೆ ಎನ್ನಲಾಗಿದೆ. ಮೃತದೇಹವನ್ನು ಬೈಕ್‌ನಲ್ಲಿ ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು ವೈದ್ಯರ ಬಳಿ “ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾಳೆ” ಎಂದು ಹೇಳಿದ್ದಾನೆ. ಆದರೆ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ವೈದ್ಯರಿಗೆ ಮಹಿಳೆಯ ದೇಹದ ಮೇಲಿನ ಗಾಯಗಳು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ವಿಚಾರಣೆ ತೀವ್ರವಾಗುತ್ತಿದ್ದಂತೆ ಆರೋಪಿ ಆಸ್ಪತ್ರೆ ಆವರಣದಿಂದಲೇ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಮೇಲೆ ಕ್ರೂರ ಹಲ್ಲೆ ನಡೆದಿರುವುದು ಬೆಳಕಿಗೆ ಬಂದಿದೆ. ವರದಿಯಲ್ಲಿ ಹಲವು ಗಂಭೀರ ಗಾಯಗಳು ಪತ್ತೆಯಾಗಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಮಹಿಳೆ ಗರ್ಭಿಣಿಯಾಗಿದ್ದ ಕಾರಣ ಹೊಟ್ಟೆಯಲ್ಲಿದ್ದ ಮಗುವಿನ ಜೀವವೂ ಕಳೆದುಹೋಗಿರುವುದು ಘಟನೆಗೆ ಮತ್ತಷ್ಟು ದಾರುಣತೆ ತಂದಿದೆ.
ಸ್ಥಳೀಯ ಗ್ರಾಮಸ್ಥರು ಹಾಗೂ ಮಹಿಳಾ ಸಂಘಟನೆಗಳು ಘಟನೆಯನ್ನು ಖಂಡಿಸಿ ಆರೋಪಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿವೆ. “ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳಿಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ” ಎಂದು ಸಾಮಾಜಿಕ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ, ಆರೋಪಿ ಪತ್ತೆಗೆ ವಿವಿಧ ಪ್ರದೇಶಗಳಲ್ಲಿ ಶೋಧ ಮುಂದುವರೆದಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.