ಬೆಳಗಾವಿ; ಬೆಳಗಾವಿಯಲ್ಲಿ ನಡೆದ ತಾಳಮದ್ದಳೆ ಅಪೂರ್ವ ಯಶಸ್ಸು ಕಂಡಿತು. ನಿಜಕ್ಕೂ ನಮ್ಮ ನಿರಿಕ್ಷೆ ಮೀರಿ ಯಶಸ್ಸು ಕಂಡ ಕಾರ್ಯಕ್ರಮ. ಪ್ರಬುದ್ಧ ಪ್ರೇಕ್ಷಕ
ವರ್ಗದವರಿಂದ ತುಂಬಿದ ಸಭಾಗೃಹದಲ್ಲಿ ಎರಡು ತಾಸು ನಡೆದ ಶ್ರೀ ಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮ ಎಲ್ಲರಿಂದಲೂ ಅಪಾರ ಪ್ರಶಂಸೆ ಪಡೆದುಕೊಂಡಿತು ಎನ್ನುವುದು ಸಂಘಟಕರಾದ ಸಪ್ತಕದ ಜಿ. ಎಸ್. ಹೆಗಡೆ ಮತ್ತು ನಮಗೆ ಬಹಳ ಸಂತೋಷದ ಮತ್ತು ಹೆಮ್ಮೆಯ ಸಂಗತಿ.
ಬೆಳಗಾವಿ ಭಾಗದಲ್ಲೇ ಅಪರೂಪವೆನಿಸಿರುವ ತಾಳಮದ್ದಳೆಯ ಹೊಸ ಅನುಭವವನ್ನು ಪಡೆದ ಶ್ರೋತೃಗಳಿಗೆ ನಿಜವಾಗಿಯೂ ಒಂದು ಹೊಸ ಅನುಭವವನ್ನು ಕೊಟ್ಟ ತಾಳಮದ್ದಳೆ ಕಲಾವಿದರಿಗೂ ನಾವು ವಿಶೇಷ ಕೃತಜ್ಞತೆಗಳನ್ನು ಹೇಳಲೇಬೇಕು.
ಬೆಂಗಳೂರಿನ ಸಪ್ತಕ ಸಂಗೀತ ಸಂಸ್ಥೆಯ ಸಹಕಾರದೊಡನೆ ನಾವಿಲ್ಲಿ ಈ ಕಾರ್ಯಕ್ರಮ ಸಂಘಟಿಸಿದ್ದೆವು. ಕಾರ್ಯಕ್ರಮದ ಆರಂಭದಲ್ಲಿ ಸಪ್ತಕದ ರೂವಾರಿ ಶ್ರೀ ಜಿ. ಎಸ್. ಹೆಗಡೆ ಅವರಿಗೆ ಎಪ್ಪತ್ತೈದರ ಅಮೃತ ಸನ್ಮಾನದ ಗೌರವ ನೀಡಲಾಯಿತು. ರಂಗಸಂಪದದ ಡಾ. ಅರವಿಂದ ಕುಲಕರ್ಣಿ, ರಂಗ ಸೃಷ್ಟಿಯ ಶ್ರೀ ರಮೇಶ ಜಂಗಲ್, ಕಲಾರಂಗದ ಶ್ರೀ ರವಿ ಕೊಟಾರಗಸ್ತಿ, ಸಪ್ತಸ್ವರದ ಶ್ರೀಮತಿ ನಿರ್ಮಲಾ ಪ್ರಕಾಶ ಇವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಸುಬ್ರಹ್ಮಣ್ಯ ಭಟ್ಟ, ಶ್ರೀ ಮುರುಗೇಶ ಶಿವಪೂಜಿ, ಶ್ರೀ ಶಿರೀಷ ಜೋಶಿ, ಶ್ರೀ ಪ್ರಭಾಕರ ಶಹಾಪುರಕರ, ಶ್ರೀಮತಿ ಭಾರತಿ ಭಟ್ , ಶ್ರೀ ಚಂದ್ರಶೇಖರ ನವಲಗುಂದ, ಶ್ರೀ ಆನಂದ ಪುರಾಣಿಕ, ಶ್ರೀ ಸತ್ಯನಾರಾಯಣ ಇವರೆಲ್ಲರೂ ಸೇರಿ ಜಿ. ಎಸ್. ಹೆಗಡೆಯವರ ಸನ್ಮಾನಕ್ಕೆ ಕೈಜೋಡಿಸಿದರು.
ನಂತರ ನಡೆದ ತಾಳಮದ್ದಳೆಯಲ್ಲಿ ಹಿರಿಯ ಭಾಗವತರಾದ ಶ್ರೀ ಗೋಪಾಲಕೃಷ್ಣ ಜೋಗಿಮನೆಯವರು, ಅರ್ಥಧಾರಿಗಳಾದ ಶ್ರೀ ಶಿವರಾಮ ಗಾಂವಕರ( ಕೃಷ್ಣ) , ನಾರಾಯಣ ಯಾಜಿ ಸಾಲೇಬೈಲು ( ಕೌರವ), ಶ್ರೀ ದಿವಾಕರ ಹೆಗಡೆ ( ವಿದುರ) ಹಾಗೂ ಮದ್ದಳೆಯಲ್ಲಿ ಕುಮಾರ ಮಯೂರ ಹೆಗಡೆ ಹರಿಕೇರಿ ಇವರು ಬಹಳ ಸೊಗಸಾಗಿ ಕೃಷ್ಣ ಸಂಧಾನ ಕಥಾಭಾಗವನ್ನು ಪ್ರಸ್ತುತಪಡಿಸಿದರು. ಕಲಾರಸಿಕರು ಮಂತ್ರಮುಗ್ಧರಾಗಿ ೧೫೦ ನಿಮಿಷಗಳ ಕಾಲ ತಾಳಮದ್ದಳೆಯ ರುಚಿ ಸವಿದರು. ಜೋಗಿಮನೆಯವರ ಮಧುರ ಕಂಠದ ಶುದ್ಧ ಯಕ್ಷಗಾನೀಯ ಶೈಲಿಯ ಭಾವಪೂರ್ಣ ಭಾಗವತಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕುಮಾರ ಮಯೂರನ ಮದ್ದಳೆ ಕೈಚಳಕ, ಮೂವರೂ ಅರ್ಥಧಾರಿಗಳ ಪ್ರಬುದ್ಧ ಮಾತುಗಾರಿಕೆ ಅಭೂತಪೂರ್ವ ಯಶಸ್ಸಿಗೆ ಕಾರಣವಾಯಿತು.
ಕಾರ್ಯಕ್ರಮದ ನಂತರ ಪ್ರತಿಯೊಬ್ಬರೂ ಕಲಾವಿದರನ್ನು ಅಭಿನಂದಿಸಿದ್ದು , ಮತ್ತೆ ಇಂತಹ ಕಾರ್ಯಕ್ರಮ ಆಗಬೇಕೆಂದು ಜನ ಅಪೇಕ್ಷಿಸಿದ್ದು ಸಂಘಟಕರಾದ ನಮಗೆ ಖುಷಿಯ ಸಂಗತಿ. ಎಲ್ಲ ಕಲಾವಿದರಿಗೂ, ನಮ್ಮೊಡನೆ ಸಹಕರಿಸಿದ ಸಂಸ್ಕಾರ ಭಾರತಿ, ರಂಗಸಂಪದ, ರಂಗಸೃಷ್ಟಿ, ಕಲಾರಂಗ, ಸಪ್ತಸ್ವರ, ವಾಗ್ದೇವಿ ಗಮಕ ಸಂಸ್ಥೆ, ನಾದಸುಧಾ ಸಂಸ್ಥೆ, ಸಂಗೀತ ಕಲಾಕಾರ ಸಂಘ ಕರ್ನಾಟಕ ಪತ್ರಕರ್ತರ ಸಂಘ , ನಿವೇದಾರ್ಪಣ ಅಕಾಡೆಮಿ, ಕೃಷ್ಣಮೂರ್ತಿ ಪುರಾಣಿಕ ಟ್ರಸ್ಟ್ ಮೊದಲಾದ ಸಂಸ್ಥೆಗಳಿಗೆ ಸಪ್ತಕದ ಪರವಾಗಿ ಕಾರ್ಯಕ್ರಮದ ಪ್ರಮುಖ ಸಂಘಟಕರಾದ ಎಲ್. ಎಸ್. ಶಾಸ್ತ್ರಿ ಅವರು ಕೃತಜ್ಞತೆಗಳನ್ನು ಅರ್ಪಿಸಿದರು.