LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಜಯಪುರ ಬ್ಯಾಂಕ್‌ನ 58 ಕೆಜಿ ಚಿನ್ನ ದರೋಡೆ ಪ್ರಕರಣ: ಮ್ಯಾನೇಜರ್ ಸೇರಿ ಮೂವರ ಬಂಧನ

ವಿಜಯಪುರ: ಕಳೆದ ತಿಂಗಳು ಮನಗೂಳಿ ಪಟ್ಟಣದಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆ.ಜಿ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆನರಾ ಬ್ಯಾಂಕ್‌ನ ಸೀನಿಯರ್ ಮ್ಯಾನೇಜರ್ ಆಗಿದ್ದ, ಸದ್ಯ ವಿಜಯಪುರ ಜಿಲ್ಲೆಯ ರೋಣಿಹಾಳ್ ಗ್ರಾಮದ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿರುವ ವಿಜಯಕುಮಾರ್ ಮಿರಿಯಾಲ, ಹುಬ್ಬಳ್ಳಿಯ ಖಾಸಗಿ ಕಂಪೆನಿ ಉದ್ಯೋಗಿ ಚಂದ್ರಶೇಖರ್ ನೆರೆಲ್ಲಾ, ಸುನೀಲ್ ಮೋಕಾ ಬಂಧಿತ ಆರೋಪಿಗಳು.

ಮೇ 25 ರಂದು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನ ಲಾಕರ್‌ನಲ್ಲಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆ.ಜಿ (58,976.94 ಗ್ರಾಂ) ಚಿನ್ನದ ಆಭರಣಗಳು ಹಾಗೂ ರೂ. 5,20,450 ನಗದು ಕಳ್ಳತನವಾಗಿತ್ತು.

ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು, "ಬಂಧಿತ ಆರೋಪಿಗಳು ಹುಬ್ಬಳ್ಳಿಯವರು. ಆರೋಪಿಗಳು ವ್ಯವಸ್ಥಿತವಾಗಿ ಒಳಸಂಚು ಮಾಡಿ ಬ್ಯಾಂಕಿನಲ್ಲಿದ್ದ ಬೃಹತ್ ಮೊತ್ತದ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದಲ್ಲದೆ, ತನಿಖೆಯ ದಿಕ್ಕು ತಪ್ಪಿಸುವಂತಹ ಹಲವಾರು ದೃಶ್ಯಾವಳಿಗಳನ್ನು ಸೃಷ್ಟಿಸಿದ್ದರೂ ಪ್ರಕರಣವನ್ನು ಭೇದಿಸಲಾಗಿದೆ" ಎಂದರು.

"ಆರೋಪಿಗಳು ಬ್ಯಾಂಕಿನ ಕಿಟಕಿ ಕತ್ತರಿಸಿ ಒಳಗೆ ನುಗ್ಗಿ, ಸೇಫ್ ಲಾಕರ್ ರೂಮಿನ ಗ್ರಿಲ್ ಮುರಿದು ಕಳ್ಳತನ ಮಾಡಿದ್ದರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 2 ಕಾರುಗಳು ಹಾಗೂ ಅಂದಾಜು 10 ಕೋಟಿ 75 ಲಕ್ಷ ರೂ. ಮೌಲ್ಯದ 10.5 ಕೆ.ಜಿ ಬಂಗಾರದ ಆಭರಣ ಹಾಗೂ ಆಭರಣವನ್ನು ಕರಗಿಸಿದ ಬಂಗಾರದ ಗಟ್ಟಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸಾಗಟ ಮಾಡಲು ಸುಲಭವಾಗುತ್ತದೆ ಎಂದು ಕದ್ದ ಚಿನ್ನವನ್ನೆಲ್ಲಾ ಕರಗಿಸಿದ್ದರು. ಇನ್ನುಳಿದ ಆರೋಪಿಗಳು ಹಾಗೂ ಕಳವಾದ ವಸ್ತುಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

"ಆರೋಪಿಗಳು ದರೋಡೆಗೆ ಹಲವು ತಿಂಗಳುಗಳಿಂದ ಚರ್ಚಿಸಿ, ಪ್ಲ್ಯಾನ್ ಮಾಡಿದ್ದರು. ಬ್ಯಾಂಕ್ ಇದ್ದ ಪ್ರದೇಶವನ್ನು ಅಧ್ಯಯನ ಮಾಡಿ, ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ವಿಜಯಕುಮಾರ್ ಮಿರಿಯಾಲ ವರ್ಗಾವಣೆಗೂ ಮುನ್ನವೇ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಕೀಯನ್ನು ಉಳಿದ ಆರೋಪಿಗಳಿಗೆ ಕೊಟ್ಟು ನಕಲಿ ಕೀ ಮಾಡಿಸಿಕೊಂಡಿದ್ದ. ಮಾತ್ರವಲ್ಲದೆ ಆ ಕೀಗಳು ಕೆಲಸ ಮಾಡುತ್ತವೆಯೋ ಇಲ್ಲವೋ ಎನ್ನುವುದನ್ನೂ ಟೆಸ್ಟ್ ಮಾಡಿ ಪರಿಶೀಲಿಸಿದ್ದ" ಎಂದು ತಿಳಿಸಿದ್ದಾರೆ.

"ವಿಜಯ್ ಕುಮಾರ್ ಮೇಲೆ ಜವಾಬ್ದಾರಿ ಇರುತ್ತದೆ. ಆತನ ಮೇಲೆ ಯಾವುದೇ ಸಮಸ್ಯೆ ಆಗಬಾರದು ಎಂದು, ಆತ ವರ್ಗಾವಣೆ ಆಗುವವರೆಗೆ ಕಳ್ಳತನ ಮಾಡಲು ಕಾದಿದ್ದರು. ಹೊಸ ಮ್ಯಾನೇಜರ್ ಬಂದ ಮೇಲೆ ನಾಲ್ಕನೇ ದಿನಕ್ಕೆ, ಅಂದರೆ ಮೇ 23-24ಕ್ಕೆ ದರೋಡೆ ನಡೆಸುವ ಪ್ಲ್ಯಾನ್ ಮಾಡಿದ್ದಾರೆ. ಅದರಂತೆ ಮೇ 23ಕ್ಕೆ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಮೇ 23 ರಂದು ಆರ್‌ಸಿಬಿ ಹಾಗೂ ಹೈದರಾಬಾದ್ ಮ್ಯಾಚ್ ದಿನ, ಆರ್‌ಸಿಬಿ ಗೆದ್ದರೆ ಹುಡುಗರು ಪಟಾಕಿ ಹಚ್ಚಿ ಸಂಭ್ರಮಿಸುವಾಗ, ಒಳಗೆ ನುಗ್ಗುವ ಪ್ಲ್ಯಾನ್ ಮಾಡಿದ್ದರು. ಆದರೆ ಆರ್‌ಸಿಬಿ ಸೋತ ಕಾರಣ ಕೈಬಿಟ್ಟಿದ್ದಾರೆ. ಹಾಗಾಗಿ ಮೇ 24ಕ್ಕೆ ದರೋಡೆ ಮಾಡಲು ನಿರ್ಧರಿಸಿದ್ದರು. ಸಿಸಿಟಿವಿ ಡೈವರ್ಟ್ ಮಾಡಿ, ಹೈಮಾಸ್ಕ್ ಲೈಟ್ ಕೇಬಲ್ ಕಟ್ ಮಾಡಿದ್ದರು" ಎಂದು ಹೇಳಿದ್ದಾರೆ.

"ಇನ್ನು ಕಳ್ಳತನ ಮಾಡಿದ ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದಕ್ಕೆ ಆನ್‌ಲೈನ್‌ಗಳಲ್ಲಿ ಇಂಗ್ಲಿಷ್, ಹಿಂದಿ ಸಿನಿಮಾಗಳನ್ನು ನೋಡಿ ಅಧ್ಯಯನ ಮಾಡಿದ್ದರು. ಆ ದಿನ ಯಾರು ಯಾವ ಬಟ್ಟೆ, ಮಾಸ್ಕ್ ಹಾಕಬೇಕೆಂಬುದನ್ನೂ ಪ್ಲ್ಯಾನ್ ಮಾಡಿದ್ದರು. ತಾವು ಬಳಸಿದ ದ್ವಿಚಕ್ರ ವಾಹನಗಳನ್ನು ಯಾರಿಗೂ ಗೊತ್ತಾಗಬಾರದೆಂದು ಟ್ರಕ್‌ನಲ್ಲಿ ಸಾಗಿಸಿದ್ದಾರೆ" ಎಂದು ವಿವರಿಸಿದ್ದಾರೆ.

"ಆರೋಪಿಗಳು ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿರುವ ಬ್ಯಾಂಕ್ ದರೋಡೆಗಳನ್ನು ಆರೋಪಿಗಳು ಅಧ್ಯಯನ ಮಾಡಿದ್ದಾರೆ. ತಮಿಳುನಾಡು, ಕೇರಳದಲ್ಲಿ ಮಾಟ ಮಂತ್ರ ಮಾಡಿ ದರೋಡೆ ಮಾಡಿರುವ ಪ್ರಕರಣಗಳನ್ನು ನೋಡಿದ್ದಾರೆ. ಹೀಗಾಗಿ ಕುಂಕುಮ, ಅರಿಶಿನ, ಊದುಬತ್ತಿಗಳನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದರು. ಈ ಮೂಲಕ ಕಳ್ಳರು ತಮಿಳುನಾಡು, ಕೇರಳದವರೆಂಬ ಊಹೆ ಪೊಲೀಸರಿಗೆ ಬರಲಿ ಎಂದು ದಾರಿತಪ್ಪಿಸುವ ಯತ್ನ ಮಾಡಿದ್ದರು. ಶ್ವಾನಗಳಿಗೆ ವಾಸನೆ ಗೊತ್ತಾಗದಂತೆ, ಪೊಲೀಸರಿಗೆ ಫಿಂಗರ್ ಪ್ರಿಂಟ್ ಸಿಗದಂತೆ ಮಾಡುವ ತಂತ್ರದ ಭಾಗವಾಗಿ ಖಾರದ ಪುಡಿಯನ್ನು ಎರಚಿದ್ದರು" ಎಂದರು.

ಈ ಪ್ರಕರಣವು ರಾಜ್ಯದಲ್ಲಿಯೇ ಎರಡನೇ ಅತೀದೊಡ್ಡ ಚಿನ್ನಾಭರಣ ಕಳ್ಳತನ ಪ್ರಕರಣವಾಗಿದೆ. ಬ್ಯಾಂಕ್ ಸಿಸಿಟಿವಿಯ ಎನ್‌ವಿಆರ್ ತೆಗೆದು ಪಕ್ಕಾ ಪ್ಲ್ಯಾನ್ ಮಾಡಿಯೇ ಕೃತ್ಯ ಎಸಗಿದ್ದರು. ಈ ಪ್ರಕರಣವನ್ನು ಭೇದಿಸಲು ಎಸ್‌ಪಿ ಲಕ್ಷ್ಮಣ್ ನಿಂಬರಗಿ ಅವರು 8 ತಂಡಗಳ್ನು ರಚಿಸಿದ್ದರು ಎಂದು ತಿಳಿದುಬಂದಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026