ಶ್ರೀರಂಗಪಟ್ಟಣ: ಕೆರೆಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರಾಜಸ್ಥಾನ ಮೂಲದ ಸವಾಲ್ ಸಿಂಗ್ ಹಾಗೂ ಗಿರಿಧರ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಾಲೂಕಿನ ಮಹದೇವಪುರ ಸಮೀಪವಿರುವ 'ಹಾರ್ಸ್ ರೈಡಿಂಗ್ ಅಡ್ವೆಂಚರ್ಸ್'ನಲ್ಲಿ ಕೆಲಸ ಮಾಡಿಕೊಂಡಿದ್ದರು.
ಘಟನೆಯ ವಿವರ:
ಶನಿವಾರ ಮಧ್ಯಾಹ್ನ ಸವಾಲ್ ಸಿಂಗ್ ಮತ್ತು ಗಿರಿಧರ್ ತಮ್ಮ ನಾಲ್ವರು ಸ್ನೇಹಿತರೊಂದಿಗೆ ಹೆಬ್ಬಾಡಿಹುಂಡಿ ಗ್ರಾಮದ ಕೆರೆಗೆ ಈಜಾಡಲು ತೆರಳಿದ್ದರು. ಈ ವೇಳೆ ನೀರಿನ ಆಳದ ಅರಿವಿಲ್ಲದೆ ಇಬ್ಬರೂ ಮುಳುಗಲಾರಂಭಿಸಿದ್ದು, ರಕ್ಷಣೆಗೆ ಸ್ನೇಹಿತರು ಪ್ರಯತ್ನಿಸಿದರೂ ಫಲಕಾರಿಯಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಶ್ರೀರಂಗಪಟ್ಟಣದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ತೀವ್ರ ಕಾರ್ಯಾಚರಣೆಯ ಬಳಿಕ ಕೆರೆಯಿಂದ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ದುರ್ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.