ನವದೆಹಲಿ: ವಿಶ್ವದ ಶೇ. 70ರಷ್ಟು ವೆಬ್‌ಸೈಟ್‌ಗಳಿಗೆ ಆಧಾರವಾಗಿರುವ ಪಿಎಚ್‌ಪಿ (PHP) ಪ್ರೋಗ್ರಾಮಿಂಗ್ ಭಾಷೆಯಲ್ಲಿ ಭಾರಿ ಭದ್ರತಾ ಲೋಪಗಳು ಪತ್ತೆಯಾದ ಬೆನ್ನಲ್ಲೇ, ಸೈಬರ್ ತಜ್ಞರು ಮತ್ತು ಜಾಗತಿಕ ಟೆಕ್ ದಿಗ್ಗಜರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
"ಇದು ಕೇವಲ ಆರಂಭವಷ್ಟೇ, ಇಂತಹ ಆಘಾತಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿವೆ. ಇಡೀ ಜಗತ್ತು ಇದಕ್ಕೆ ಸಜ್ಜಾಗಬೇಕಿದೆ" ಎಂದು ಪಾಲೊ ಆಲ್ಟೊ ನೆಟ್‌ವರ್ಕ್ಸ್ ಸಿಇಒ ನಿಕೇಶ್ ಅರೋರಾ ಹಾಗೂ ಶ್ವೇತಭವನದ ಮಾಜಿ ಎಐ ಸಲಹೆಗಾರ ಶ್ರೀರಾಮ್ ಕೃಷ್ಣನ್ ಎಚ್ಚರಿಸಿದ್ದಾರೆ.
"ಟ್ರಾಫಿ ಬೇಟೆಗಾರರು ಹೆಚ್ಚಾಗಲಿದ್ದಾರೆ": ನಿಕೇಶ್ ಅರೋರಾ ಆತಂಕ
ಟಿಬಿಪಿಎನ್‌ಗೆ (TBPN) ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಲೊ ಆಲ್ಟೊ ನೆಟ್‌ವರ್ಕ್ಸ್‌ನ ಸಿಇಒ ನಿಕೇಶ್ ಅರೋರಾ, "ಈಗ ನಡೆದಿರುವ ಘಟನೆಗಿಂತ ಮುಂದೆ ಏನಾಗಲಿದೆ ಎಂಬುದೇ ನನ್ನಲ್ಲಿ ಹೆಚ್ಚು ಆತಂಕ ತಂದಿದೆ. ಇದು ಕೇವಲ ಒಂದು ಘಟನೆಯಷ್ಟೇ, ಇಂಥವು ಇನ್ನಷ್ಟು ಸಾಲಾಗಿ ಬರಲಿವೆ," ಎಂದು ಎಚ್ಚರಿಸಿದರು.
ಹ್ಯಾಕಿಂಗ್ ಲೋಕದಲ್ಲಿ ಕೇವಲ ಗೌರವ ಮತ್ತು ಪ್ರಸಿದ್ಧಿ (Street Cred) ಗಳಿಸಲು ಇಂತಹ ಭದ್ರತಾ ಲೋಪಗಳನ್ನು ಹುಡುಕುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. "ಇಷ್ಟೊಂದು ದೊಡ್ಡ ಪ್ರಮಾಣದ ಲೋಪ ಬಯಲಿಗೆ ಬಂದಾಗ, ಜನ ಇದನ್ನು ಒಂದು ಟ್ರೋಫಿ ಬೇಟೆಯಂತೆ ಕಾಣಲು ಶುರುಮಾಡುತ್ತಾರೆ. 'ನಾನು ಹಿಂದಿನವನಿಗಿಂತ ಹೆಚ್ಚು ಜಾಣ' ಎಂದು ಸಾಬೀತುಪಡಿಸಲು ಮುಂದಿನ PHP ದೋಷವನ್ನು ಎಲ್ಲಿ ಹುಡುಕಲಿ ಎಂದು ತಡಕಾಡುತ್ತಾರೆ. ಈ ಸುದ್ದಿ ಹೊರಬಿದ್ದ ತಕ್ಷಣ ನಾನೇ ಇದನ್ನು ಪತ್ತೆ ಮಾಡಿದ್ದು ಎಂದು ನಾಲ್ವರು ನನಗೆ ಸಂದೇಶ ಕಳುಹಿಸಿದ್ದರು. ಆದರೆ ಇದು ಒಳ್ಳೆಯ ಬೆಳವಣಿಗೆಯಲ್ಲ; ಇದು ಇಡೀ ಸೈಬರ್ ಭದ್ರತೆಯನ್ನು ಸಂಕಷ್ಟಕ್ಕೆ ತಳ್ಳುತ್ತದೆ," ಎಂದು ಅರೋರಾ ಕಳವಳ ವ್ಯಕ್ತಪಡಿಸಿದರು.
PHP2Shell: ಕ್ಷಣಾರ್ಧದಲ್ಲಿ ಲಕ್ಷಾಂತರ ಹ್ಯಾಕಿಂಗ್ ಯತ್ನಗಳು
ವಿಶ್ವದ ಲಕ್ಷಾಂತರ ವೆಬ್‌ಸೈಟ್‌ಗಳು ಬಳಸುವ PHP ಭಾಷೆಯಲ್ಲಿ 'ಪಿಎಚ್‌ಪಿ2ಶೆಲ್' (PHP2Shell) ಹೆಸರಿನ ಎರಡು ಅತಿ ಸೂಕ್ಷ್ಮ ದೋಷಗಳು ಪತ್ತೆಯಾಗಿವೆ. ಇವುಗಳನ್ನು ದುರುಪಯೋಗಪಡಿಸಿಕೊಂಡು ಯಾವುದೇ ಪಾಸ್‌ವರ್ಡ್ ಅಥವಾ ಪೂರ್ವ ಅನುಮತಿಯಿಲ್ಲದೆ ಹ್ಯಾಕರ್‌ಗಳು ಇಡೀ ವೆಬ್ ಸರ್ವರ್‌ಗಳನ್ನೇ ತಮ್ಮ ವಶಕ್ಕೆ ಪಡೆಯಬಹುದಾಗಿದೆ.
ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಹ್ಯಾಕರ್‌ಗಳ ಉಪಟಳ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಕ್ಲೌಡ್‌ಫ್ಲೇರ್ (Cloudflare) ಸಿಇಒ ಮ್ಯಾಥ್ಯೂ ಪ್ರಿನ್ಸ್ ತಿಳಿಸಿದ್ದಾರೆ. ಸುದ್ದಿ ಬಹಿರಂಗವಾಗುವುದಕ್ಕೂ ಮುನ್ನ ಸಾವಿರಗಳಲ್ಲಿದ್ದ ಹ್ಯಾಕಿಂಗ್ ಪ್ರಯತ್ನಗಳು, ಕೇವಲ 45 ನಿಮಿಷಗಳಲ್ಲಿ ಹತ್ತಾರು ಸಾವಿರಕ್ಕೆ ಹಾಗೂ ಎರಡು ಗಂಟೆಗಳ ಅವಧಿಯಲ್ಲಿ ಲಕ್ಷಾಂತರ ದಾಳಿಗಳಾಗಿ ಬದಲಾಗಿ, ಸದ್ಯ ಕೋಟ್ಯಂತರ ಮಟ್ಟಕ್ಕೆ ತಲುಪಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಕಿಪೀಡಿಯಾ, ಯುರೋಪ್ ಸರ್ಕಾರಿ ವೆಬ್‌ಸೈಟ್‌ಗಳು ಡೌನ್
ದೋಷವನ್ನು ಸರಿಪಡಿಸಲು PHP ಫೌಂಡೇಶನ್ ಅಕ್ಟೋಬರ್ 21 ರಂದು ತುರ್ತು ಸೆಕ್ಯುರಿಟಿ ಅಪ್‌ಡೇಟ್ ಬಿಡುಗಡೆ ಮಾಡಿದೆ. ಅಮೆರಿಕದ ಎನ್‌ಎಸ್‌ಎ (NSA) ಮತ್ತು ಎಫ್‌ಬಿಐ (FBI) ಕೂಡ ಎಚ್ಚರಿಕೆ ನೀಡಿದ್ದು, ತಕ್ಷಣ ಅಪ್‌ಡೇಟ್ ಅಳವಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಪ್ಲಾಟ್‌ಫಾರ್ಮ್‌ಗಳನ್ನು ಆಫ್‌ಲೈನ್‌ಗೆ ತಳ್ಳಲು ಸೂಚಿಸಿವೆ.
ಮುನ್ನೆಚ್ಚರಿಕಾ ಕ್ರಮವಾಗಿ ಯುರೋಪಿಯನ್ ಯೂನಿಯನ್‌ನ (EU) ಹಲವು ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸಲಾಗಿದ್ದರೆ, ವಿಕಿಮೀಡಿಯಾ ಫೌಂಡೇಶನ್ ಕೂಡ ತನ್ನ ಸಿಸ್ಟಂಗಳನ್ನು ರಕ್ಷಿಸಿಕೊಳ್ಳಲು ವಿಕಿಪೀಡಿಯಾದ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಎಐ ಶೋಧಿಸಿದ 10 ವರ್ಷಗಳ ರಹಸ್ಯ: ಸಾಫ್ಟ್‌ವೇರ್ ಭದ್ರತೆಗೆ ಬಲ ನೀಡಲು ಸಲಹೆ
ಸುಮಾರು ಒಂದು ದಶಕದಿಂದ ಯಾರಿಗೂ ಕಾಣದಂತೆ ಸುಪ್ತವಾಗಿದ್ದ ಈ ಗಂಭೀರ ದೋಷವನ್ನು ಕ್ಯಾಲಿಫ್.ಐಒ (Calif.IO) ಸಂಸ್ಥೆಯ ಸಂಶೋಧಕರು ಓಪನ್‌ಎಐನ ‘ಜಿಪಿಟಿ-5.6 ಸಾಲ್’ (GPT-5.6 Sol) ಎಐ ಮಾದರಿ ಬಳಸಿ ಪತ್ತೆಹಚ್ಚಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ತಂತ್ರಜ್ಞಾನ ನೀತಿ ತಜ್ಞ ಶ್ರೀರಾಮ್ ಕೃಷ್ಣನ್, "ಇಂದಿನ ಘಟನೆ ಮುಂದಾಗಲಿರುವ ಅಪಾಯಗಳ ಮುನ್ಸೂಚನೆ. ಎಐ ಮಾದರಿಗಳು ದೀರ್ಘಕಾಲದ ದೋಷಗಳನ್ನು ಹುಡುಕಿ ನಮ್ಮನ್ನು ಸುರಕ್ಷಿತವಾಗಿಡಲು ನೆರವಾಗಬಹುದು. ಆದರೆ, ಇಂತಹ ಲೋಪಗಳು ಬೆಳಕಿಗೆ ಬಂದಾಗ ತಕ್ಷಣವೇ ಪರಿಹಾರ (Fixes) ಒದಗಿಸುವ ಮತ್ತು ಜಾರಿಗೆ ತರುವ ಶಕ್ತಿಯನ್ನು ನಮ್ಮ ಸಾಫ್ಟ್‌ವೇರ್ ಸಪ್ಲೈ ಚೈನ್ ಹೊಂದಿರಬೇಕು. ಜಾಗತಿಕ ಮೂಲಸೌಕರ್ಯ ರಕ್ಷಣೆಗೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಅತ್ಯಗತ್ಯ," ಎಂದು ಹೇಳಿದ್ದಾರೆ.