ಬೆಂಗಳೂರು: ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚಾಗುತ್ತಿರುವುದರಿಂದ UPI ಮೂಲಕ ಹಣ ವರ್ಗಾವಣೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಆತುರದಲ್ಲಿ ಅಥವಾ ತಪ್ಪಾದ ವಿವರ ಆಯ್ಕೆ ಮಾಡುವುದರಿಂದ ಹಣ ಬೇರೊಬ್ಬರ ಖಾತೆಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಗಾಬರಿಯಾಗುವ ಅಗತ್ಯವಿಲ್ಲ. ತಪ್ಪು ಪಾವತಿ ಆಗಿರುವುದು ಗಮನಕ್ಕೆ ಬಂದ ತಕ್ಷಣ ಕೆಲವು ಕ್ರಮಗಳನ್ನು ಕೈಗೊಂಡರೆ ಹಣ ವಾಪಸ್ ಪಡೆಯುವ ಸಾಧ್ಯತೆ ಹೆಚ್ಚುತ್ತದೆ.
ಮೊದಲು ವಹಿವಾಟಿನ ಸ್ಥಿತಿ ಪರಿಶೀಲಿಸಿ
ತಪ್ಪಾಗಿ ಹಣ ಕಳುಹಿಸಿರುವುದು ಗೊತ್ತಾದ ತಕ್ಷಣ ನಿಮ್ಮ UPI ಆ್ಯಪ್ ತೆರೆಯಿರಿ. ಪಾವತಿ ಯಶಸ್ವಿಯಾಗಿದೆಯೇ, ಬಾಕಿಯಲ್ಲಿದೆಯೇ ಅಥವಾ ವಿಫಲವಾಗಿದೆಯೇ ಎಂಬುದನ್ನು ಪರಿಶೀಲಿಸಿ. ವಹಿವಾಟಿನ ವಿವರಗಳ ಸ್ಕ್ರೀನ್‌ಶಾಟ್ ತೆಗೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ.
UPI ಆ್ಯಪ್‌ನಲ್ಲೇ ದೂರು ದಾಖಲಿಸಿ
ಹಣ ಕಳುಹಿಸಿರುವ UPI ಆ್ಯಪ್‌ನಲ್ಲಿ ವಹಿವಾಟನ್ನು ಆಯ್ಕೆ ಮಾಡಿಕೊಂಡು ‘ಸಹಾಯ’, ‘ದೂರು ದಾಖಲಿಸಿ’ ಅಥವಾ ‘ಸಮಸ್ಯೆ ವರದಿ ಮಾಡಿ’ ಎಂಬ ಆಯ್ಕೆಯನ್ನು ಬಳಸಿ ದೂರು ಸಲ್ಲಿಸಬಹುದು.
ದೂರು ನೀಡುವಾಗ UPI Transaction ID, Reference Number, ವಹಿವಾಟಿನ ದಿನಾಂಕ ಹಾಗೂ ಸ್ಕ್ರೀನ್‌ಶಾಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.
ಕೂಡಲೇ ನಿಮ್ಮ ಬ್ಯಾಂಕ್‌ಗೆ ಮಾಹಿತಿ ನೀಡಿ
UPI ಆ್ಯಪ್‌ನಲ್ಲಿ ದೂರು ದಾಖಲಿಸುವುದರ ಜೊತೆಗೆ, ಹಣ ಕಡಿತಗೊಂಡಿರುವ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಂಕ್‌ನ್ನು ಕೂಡಲೇ ಸಂಪರ್ಕಿಸಿ. ಹಣ ತಪ್ಪಾದ ವ್ಯಕ್ತಿಗೆ ವರ್ಗಾವಣೆಯಾಗಿರುವುದನ್ನು ತಿಳಿಸಿ, ವಹಿವಾಟಿನ ವಿವರಗಳನ್ನು ನೀಡಿ ದೂರು ದಾಖಲಿಸಿ.
ಹಣ ಪಡೆದ ವ್ಯಕ್ತಿಯನ್ನು ಸಂಪರ್ಕಿಸಿ
ತಪ್ಪಾಗಿ ಹಣ ಪಡೆದ ವ್ಯಕ್ತಿಯ ವಿವರಗಳು ಲಭ್ಯವಿದ್ದರೆ, ಅವರನ್ನು ಸಂಪರ್ಕಿಸಿ ಪಾವತಿ ತಪ್ಪಾಗಿ ನಡೆದಿರುವುದನ್ನು ತಿಳಿಸಬಹುದು. ಹಣವನ್ನು ಸರಿಯಾದ ವಿಧಾನದಲ್ಲಿ ವಾಪಸ್ ಕಳುಹಿಸುವಂತೆ ವಿನಂತಿಸಬಹುದು.
ಆದರೆ ಹಣ ವಾಪಸ್ ಪಡೆಯುವ ನೆಪದಲ್ಲಿ ಯಾರಿಗೂ UPI PIN, OTP, ಕಾರ್ಡ್ ವಿವರಗಳು ಅಥವಾ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ನೀಡಬೇಡಿ. ಹಣ ವಾಪಸ್ ಪಡೆಯಲು UPI PIN ನಮೂದಿಸಿ ‘Refund’ ಅನ್ನು ಅನುಮೋದಿಸುವ ಅಗತ್ಯವಿಲ್ಲ.
ಈ ತಪ್ಪುಗಳನ್ನು ಮಾತ್ರ ಮಾಡಬೇಡಿ
ತಪ್ಪು ಪಾವತಿ ಗಮನಕ್ಕೆ ಬಂದ ಬಳಿಕ ದೂರು ನೀಡುವುದನ್ನು ವಿಳಂಬ ಮಾಡಬೇಡಿ.
OTP, UPI PIN ಅಥವಾ ಕಾರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಹಣ ವಾಪಸ್ ಮಾಡುತ್ತೇವೆ ಎಂದು ಹೇಳಿ ಯಾರಾದರೂ Remote Access App ಇನ್‌ಸ್ಟಾಲ್ ಮಾಡಲು ಒತ್ತಾಯಿಸಿದರೆ ಮಾಡಬೇಡಿ.
ರಿಫಂಡ್ ಪಡೆಯಲು ಅಥವಾ ‘ಅನ್‌ಲಾಕ್’ ಮಾಡಲು ಮತ್ತೆ ಹಣ ಪಾವತಿಸಬೇಡಿ.
ವಹಿವಾಟಿನ ಸ್ಕ್ರೀನ್‌ಶಾಟ್ ಹಾಗೂ ದೂರುದ Reference Number ಅನ್ನು ಅಳಿಸಬೇಡಿ.
ತಪ್ಪಾಗಿ UPI ಪಾವತಿ ಆಗಿದ್ದರೆ ವೇಗವಾಗಿ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯ. ತಕ್ಷಣ UPI ಆ್ಯಪ್ ಮತ್ತು ಬ್ಯಾಂಕ್ ಮೂಲಕ ದೂರು ದಾಖಲಿಸುವುದರಿಂದ ಹಣ ವಾಪಸ್ ಪಡೆಯುವ ಅವಕಾಶ ಹೆಚ್ಚುತ್ತದೆ.