ಭಾರತ ಕ್ರಿಕೆಟ್ ತಂಡದ ಜಾಗತಿಕ ತಾರೆ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿ ಮುಂಬೈನಲ್ಲಿ ನಡೆದ ಅಮೆರಿಕದ ಪ್ರಸಿದ್ಧ ಗಾಯಕ ಕೃಷ್ಣ ದಾಸ್ ಅವರ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಪ್ರಥಮ ಸಾಲಿನಲ್ಲಿ ಕುಳಿತು ಭಜನೆಯಲ್ಲಿ ತಲ್ಲೀನರಾಗಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಕೃಷ್ಣ ದಾಸ್ ಅವರ 'ಹರೇ ರಾಮ' ಭಜನೆಯ ಗಾಯನಕ್ಕೆ ದಂಪತಿ ತಲೆಯಾಡಿಸುತ್ತಾ ದೇವನಾಮ ಸ್ಮರಣೆ ಮಾಡುತ್ತಿರುವ ದೃಶ್ಯಗಳು ಅಭಿಮಾನಿಗಳ ಗಮನ ಸೆಳೆದಿವೆ. ಈ ಕಾರ್ಯಕ್ರಮಕ್ಕಾಗಿ ಅನುಷ್ಕಾ ಶರ್ಮಾ ಕೆಂಪು ಬಣ್ಣದ ಕುರ್ತಾ ಧರಿಸಿದ್ದರೆ, ವಿರಾಟ್ ಕೊಹ್ಲಿ ಕಪ್ಪು ಟೀ ಶರ್ಟ್ ಹಾಗೂ ತಿಳಿ ಬಣ್ಣದ ಪ್ಯಾಂಟ್ ಧರಿಸಿ ಸರಳವಾಗಿ ಕಾಣಿಸಿಕೊಂಡಿದ್ದರು.
ಅಲಿಬಾಗ್ನಿಂದ ಜೆಟ್ಟಿ ಮೂಲಕ ಮುಂಬೈಗೆ ಆಗಮಿಸಿದ್ದ ಈ ದಂಪತಿಯನ್ನು ಗೇಟ್ವೇ ಆಫ್ ಇಂಡಿಯಾ ಬಳಿಯೂ ಗುರುತಿಸಲಾಗಿದ್ದು, ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಮಾಸ್ಕ್ ಧರಿಸಿದ್ದರು. ಆಧ್ಯಾತ್ಮಿಕ ವಿಷಯಗಳಲ್ಲಿ ತೀವ್ರ ಆಸಕ್ತಿ ಹೊಂದಿರುವ ಈ ದಂಪತಿ ಈ ಹಿಂದೆ ವೃಂದಾವನದ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೂ ಹಲವು ಬಾರಿ ಭೇಟಿ ನೀಡಿದ್ದರು. ಇತ್ತೀಚೆಗೆ ಪ್ರೇಮಾನಂದ ಮಹಾರಾಜರ ಭೇಟಿಗಾಗಿ ವಿರಾಟ್ ಕೊಹ್ಲಿ ಹಣ ನೀಡಿದ್ದಾರೆ ಎಂದು ಫಲಾಹಾರಿ ಮಹಾರಾಜ್ ದಿನೇಶ್ ಶರ್ಮಾ ಮಾಡಿದ್ದ ಆರೋಪಗಳನ್ನು ಕೊಹ್ಲಿ ಅವರ ತಂಡವು ಕಟುವಾಗಿ ತಳ್ಳಿಹಾಕಿದ್ದು, ಇಂತಹ ವರದಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.
ಕೊಹ್ಲಿ ಅವರು ಕೇವಲ ತಮ್ಮ ವೈಯಕ್ತಿಕ ಶ್ರದ್ಧೆ ಹಾಗೂ ಗೌರವದಿಂದಷ್ಟೇ ಮಹಾರಾಜರನ್ನು ಭೇಟಿ ಮಾಡುತ್ತಿದ್ದಾರೆ ಎಂದು ಅವರ ವಕ್ತಾರರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದು, ಮಾಧ್ಯಮಗಳು ಯಾವುದೇ ಆಧಾರರಹಿತ ವರದಿಗಳನ್ನು ಪ್ರಕಟಿಸುವ ಮುನ್ನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ. ಪ್ರಸ್ತುತ ಲಂಡನ್ನಲ್ಲಿ ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರೊಂದಿಗೆ ನೆಲೆಸಿರುವ ಈ ದಂಪತಿ, ಭಾರತಕ್ಕೆ ಬಂದಾಗಲೆಲ್ಲಾ ಅವರ ಆಧ್ಯಾತ್ಮಿಕ ನಡೆಗಳು ಸಾರ್ವಜನಿಕವಾಗಿ ಭಾರಿ ಕುತೂಹಲ ಮೂಡಿಸುತ್ತವೆ.