ಚಿತ್ರದುರ್ಗ: ನೂತನ ಡಿಸಿ ಆಫೀಸ್ ಕಟ್ಟಡ ಎಲ್ಲಿರುತ್ತೆ ಅಂದ್ರೆ.?
ಚಿತ್ರದುರ್ಗ: ಚಿತ್ರದುರ್ಗ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ 6.30 ಎಕರೆ ಭೂಮಿಯನ್ನು ನೀಡಲು ತೋಟಗಾರಿಕೆ ಇಲಾಖೆ ಸಚಿವರು ಸಮ್ಮತಿ ಸೂಚಿಸಿದ್ದು, ಚಿತ್ರದುರ್ಗ ನಗರ ಸಮೀಪದ ಕುಂಚಿಗನಾಳು ಹತ್ತಿರ ನಿರ್ಮಾಣ ಮಾಡಲಾಗಿರುವ ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲು ಗುರುವಾರದಂದು ಬೆಂಗಳೂರಿನಲ್ಲಿ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಜಂಟಿಯಾಗಿ ನಡೆಸಿದ ಮಹತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಚಿತ್ರದುರ್ಗ ಜಿಲ್ಲೆಯ ಕುಂಚಿಗನಾಳು ಹತ್ತಿರ ನಿರ್ಮಾಣ ಮಾಡಲಾಗಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿಯು ಚಿತ್ರದುರ್ಗ ನಗರದಿಂದ ದೂರವಿದ್ದು, ಕಚೇರಿ ಕಾರ್ಯಗಳಿಗೆ ಬರುವ ಜಿಲ್ಲೆಯ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುವ ಕಾರಣದಿಂದ, ಈ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಚಿತ್ರದುರ್ಗ ನಗರದಲ್ಲಿಯೇ ನೂತನವಾಗಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಮಾಡುವ ಸಂಬಂಧ ಕಳೆದ ಒಂದು ವರ್ಷದಿಂದ ಕಂದಾಯ ಇಲಾಖೆ ಸಚಿವರು, ವೈದ್ಯಕೀಯ ಇಲಾಖೆ ಸಚಿವರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಸಕರು ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿಯೂ ಸಹ ನಿರಂತರವಾಗಿ ಸಭೆ ನಡೆಸಲಾಗಿತ್ತು.
ಈ ಸಂಬಂಧ ಗುರುವಾರದಂದು ವಿಕಾಸಸೌಧದ ಕೊಠಡಿ ಸಂಖ್ಯೆ 342 ರಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹಾಗೂ ತೋಟಗಾರಿಕೆ ಇಲಾಖೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಇವರುಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಪ್ರಸ್ತುತ ಇರುವ ತೋಟಗಾರಿಕೆ ಇಲಾಖೆಯ 6.10 ಎಕರೆ ಮತ್ತು ಹಾಪ್‍ಕಾಮ್ಸ್ ವ್ಯಾಪ್ತಿಯ 0.20 ಎಕರೆ ಸೇರಿ ಒಟ್ಟು 6.30 ಎಕರೆ ಜಮೀನನ್ನು ನೂತನ ಜಿಲ್ಲಾಧಿಕಾರಿಗಳ ನಿರ್ಮಾಣಕ್ಕೆ ನೀಡಲು ತೀರ್ಮಾನಿಸಲಾಗಿರುತ್ತದೆ. ತೋಟಗಾರಿಕೆ ಇಲಾಖೆಗೆ ಈ ಜಮೀನಿನ ಬದಲಾಗಿ ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಹೋಬಳಿ ಚಿಕ್ಕಪುರ ಗ್ರಾಮದ ರಿ.ಸ.ನಂ.96 ಮತ್ತು ರಿ.ಸ.ನಂ.101 ರಲ್ಲಿ 20.00 ಎಕರೆ ಜಮೀನನ್ನು ಸರ್ಕಾರದಿಂದ ನೀಡಲು ತೀರ್ಮಾನ ಕೈಗೊಳ್ಳಲಾಗಿರುತ್ತದೆ. ಈಗ ಇರುವ ತೋಟಗಾರಿಕೆ ಇಲಾಖೆ ಕಚೇರಿಗೆ, ಇದೇ ಜಾಗದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುವ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿಯೇ ಸ್ಥಳಾವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ರವರು, ತೋಟಗಾರಿಕೆ ಇಲಾಖೆ ಕಾರ್ಯದರ್ಶಿಗಳು, ತೋಟಗಾರಿಕೆ ಇಲಾಖೆ ನಿರ್ದೇಶಕರು, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಚಿತ್ರದುರ್ಗ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತ ಮತ್ತಿತರ ಉನ್ನತ ಅಧಿಕಾರಿಗಳು ಹಾಜರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.