ಬಾಕಿ ಬಿಲ್ ಪಾವತಿಸದಿದ್ದರೆ ಕಾಮಗಾರಿ ಸ್ಥಗಿತ
ಗುತ್ತಿಗೆದಾರರಿಂದ ಸರ್ಕಾರಕ್ಕೆ ಸವಾಲ್
ಬೆಂಗಳೂರು, ಜ.29: ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಸಂಬಂಧಿಸಿದ ಬಾಕಿ ಬಿಲ್ ಮೊತ್ತವನ್ನು ಮಾರ್ಚ್ 5ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದೆ.
ಒಟ್ಟು ಸುಮಾರು 38 ಸಾವಿರ ಕೋಟಿ ರೂ. ಬಾಕಿ ಬಿಲ್ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆಯುವುದಾಗಿ ಸಂಘ ತಿಳಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್, ಕಳೆದ ಎರಡುವರೆ ವರ್ಷಗಳಿಂದ ಸರ್ಕಾರ ಬಾಕಿ ಬಿಲ್ ಹಣ ಪಾವತಿಗೆ ನಿರಂತರವಾಗಿ ಹಿಂದೇಟು ಹಾಕುತ್ತಿದೆ. ರಾಜ್ಯದ ವಿವಿಧ ಇಲಾಖೆಗಳ ಗುತ್ತಿಗೆದಾರರಿಗೆ ಸುಮಾರು 38 ಸಾವಿರ ಕೋಟಿ ರೂ., ಜಿಬಿಎ ವ್ಯಾಪ್ತಿಯ ಗುತ್ತಿಗೆದಾರರಿಗೆ ಸುಮಾರು 2,900 ಕೋಟಿ ರೂ. ಬಾಕಿ ಹಣ ಉಳಿದಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡುವರೆ ವರ್ಷ ಕಳೆದರೂ ಗುತ್ತಿಗೆದಾರರ ಹಲವು ಸಮಸ್ಯೆಗಳು ಇನ್ನೂ ಬಗೆಹರಿಯದೆ ಉಳಿದಿವೆ. ಮುಖ್ಯಮಂತ್ರಿ ಹಾಗೂ ಹಲವು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ, ಲೋಕೋಪಯೋಗಿ ಇಲಾಖೆ, ಬಿಬಿಎಂಪಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹೊರತುಪಡಿಸಿ ಇತರೆ ಇಲಾಖೆಗಳು ಬಾಕಿ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಸರ್ಕಾರ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಮುಖ್ಯಮಂತ್ರಿಗಳು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಿಗದಿಪಡಿಸಿ ಯಾವುದೇ ಸ್ಪಷ್ಟ ಕಾರಣ ನೀಡದೇ ಮುಂದೂಡುತ್ತಿದ್ದಾರೆ. ಇದುವರೆಗೆ ಅಧಿಕೃತವಾಗಿ ಸಭೆ ಕರೆದು ಚರ್ಚಿಸಲು ಮುಖ್ಯಮಂತ್ರಿ ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆ ಹಾಗೂ ಬಿಬಿಎಂಪಿ ಹೊರತುಪಡಿಸಿ ಇತರೆ ಯಾವುದೇ ಇಲಾಖೆಯಲ್ಲಿ ಜೇಷ್ಠತೆಯನ್ನು ಪಾಲಿಸಲಾಗುತ್ತಿಲ್ಲ. ಉಪಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರನ್ನು ಎರಡು ಮೂರು ಬಾರಿ ಭೇಟಿ ಮಾಡಿದರೂ ಗುತ್ತಿಗೆದಾರರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಜಿಎಸ್ಟಿ ಶೇ.12ರ ವ್ಯತ್ಯಾಸದ ಮೊತ್ತವನ್ನು ಸರ್ಕಾರವೇ ಭರಿಸುವುದಾಗಿ ತೀರ್ಮಾನ ಕೈಗೊಂಡಿದ್ದರೂ, ಇದುವರೆಗೆ ಆರ್ಥಿಕ ಇಲಾಖೆ ಆದೇಶ ಹೊರಡಿಸಿಲ್ಲ ಎಂದು ಆರೋಪಿಸಿದರು.
ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರಗಳಲ್ಲಿ ಈ ವ್ಯವಸ್ಥೆ ಐದು ವರ್ಷಗಳ ಹಿಂದೆಯೇ ಜಾರಿಗೆ ಬಂದಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಮಧ್ಯವರ್ತಿಗಳ ದರ್ಬಾರ್ ನಡೆಯುತ್ತಿದ್ದು, ಟೆಂಡರ್ ಅನುಮೋದನೆ ಹಾಗೂ ಟೆಂಡರ್ ಹಿಂಪಡೆಯಲು ಬೆದರಿಕೆ ಹಾಕಲಾಗುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಕಮಿಷನ್ ದಂಧೆ ಹೆಚ್ಚಾಗಿದ್ದು, ಈಗಲೂ ವಿವಿಧ ಇಲಾಖೆಗಳಲ್ಲೂ ಕಮಿಷನ್ ನೀಡಿದ ಬಳಿಕವೇ ಬಾಕಿ ಬಿಲ್ ಪಾವತಿ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುತ್ತಿಗೆದಾರ ಮುನ್ನೇಗೌಡ 25 ಲಕ್ಷ ರೂ. ಬಾಕಿ ಬಿಲ್ ಹಣ ಪಾವತಿಯಾಗದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ ಹಣ ಕೇಳಲು ಹೋದರೆ ‘ಹಿಂದಿನ ಸರ್ಕಾರದ ಕೆಲಸ’ ಎಂದು ಅಧಿಕಾರಿಗಳು ಜವಾಬ್ದಾರಿ ತಪ್ಪಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂಬಂಧ ಮುಖ್ಯಮಂತ್ರಿಗಳು ತಕ್ಷಣವೇ ಗುತ್ತಿಗೆದಾರರ ಸಭೆ ಕರೆದು ಬಾಕಿ ಬಿಲ್ ಮೊತ್ತಗಳನ್ನು ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.
ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೇಗಜಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಇದುವರೆಗೆ ಒಂದೇ ಒಂದು ಟೆಂಡರ್ ಕೂಡ ಕರೆದಿಲ್ಲ. ಇದರಿಂದ ಕಲ್ಯಾಣ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗಿದೆ. ಶೇ.70ರಷ್ಟು ಶಾಸಕರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.