ಶಿವಮೊಗ್ಗ: ದೇಶದಲ್ಲಿ 27 ಕೋಟಿಗೂ ಅಧಿಕ ದುಡಿಯುವ ಯುವ ಸಮೂಹ ಸಜ್ಜಾಗಿದ್ದು, ಭಾರತವು ತನ್ನ ಅಪಾರ ಯುವಶಕ್ತಿಯ ಬಲದಿಂದ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೇರುತ್ತಿದೆ ಎಂದು ಸಾಗರದ ಉಪವಿಭಾಗಾಧಿಕಾರಿ (ಎಸಿ) ವೀರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನೆಹರೂ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವದೇಶದಲ್ಲೇ ಸಾಮರ್ಥ್ಯ ಸಾಬೀತುಪಡಿಸಿ: ಎಸಿ ಕರೆ
ಅಮೆರಿಕ ಸೇರಿದಂತೆ ವಿಶ್ವದ ಮುಂದುವರಿದ ರಾಷ್ಟ್ರಗಳು ಭಾರತೀಯ ಯುವ ಪ್ರತಿಭೆಗಳನ್ನು ಕೈಬೀಸಿ ಕರೆಯುತ್ತಿವೆ. ಆದರೆ, ನಮ್ಮ ಯುವಪೀಳಿಗೆ ಸ್ವದೇಶದಲ್ಲೇ ಉಳಿದು ತಮ್ಮ ಕೌಶಲ ಹಾಗೂ ಸಾಮರ್ಥ್ಯವನ್ನು ದೇಶದ ಪ್ರಗತಿಗೆ ಧಾರೆ ಎರೆಯಬೇಕು ಎಂದ ಅವರು, "ಗತಕಾಲದ ಇತಿಹಾಸವನ್ನು ಅರಿತುಕೊಳ್ಳದ ಹೊರತು ಹೊಸ ಇತಿಹಾಸವನ್ನು ಸೃಷ್ಟಿಸಲು ಅಸಾಧ್ಯ. ಭಾರತದ ಸುವರ್ಣ ಇತಿಹಾಸವನ್ನು ಅರಿತು, ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ಪ್ರತಿಯೊಬ್ಬ ಯುವಕನೂ ಕೈಜೋಡಿಸಬೇಕು" ಎಂದು ಆಶಯ ವ್ಯಕ್ತಪಡಿಸಿದರು.
ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವ ಹೊಣೆ ಪೋಷಕರದ್ದು: ಶಾಸಕ ಗೋಪಾಲಕೃಷ್ಣ ಬೇಳೂರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಕ್ರಾಂತಿಕಾರಿಗಳನ್ನು ಸ್ಮರಿಸಿದರು. "ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ಅವರಲ್ಲಿ ದೇಶಪ್ರೇಮದ ಕಿಚ್ಚು ತುಂಬುವುದು ತಂದೆ-ತಾಯಂದಿರ ಕರ್ತವ್ಯ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿಗೆ ಶಕ್ತಿ ತುಂಬಿದ್ದು, ಸಾಗರ ಕ್ಷೇತ್ರವೊಂದಕ್ಕೇ ಗ್ಯಾರಂಟಿಗಳ ಮೂಲಕ ₹461 ಕೋಟಿ ಅನುದಾನ ಹರಿದುಬಂದಿದೆ. ಯುವಜನರು 'ಭಾರತ್ ಜೋಡೋ' ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದರ ಜೊತೆಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು" ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪೌರಾಯುಕ್ತ ಎಚ್.ಕೆ. ನಾಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಡಾ. ಬೆನಕ ಪ್ರಸಾದ್, ತಾಲೂಕು ಪಂಚಾಯತ್ ಇಒ ಮೌನೇಶ್ ಬಡಿಗೇರ್, ಬಿಇಒ ಸದಾನಂದ ಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಮಾರಂಭದ ಅಂಗವಾಗಿ ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ ಹಾಗೂ ಎನ್‌ಸಿಸಿ ತುಕಡಿಗಳಿಂದ ಆಕರ್ಷಕ ಪಥಸಂಚಲನ (ಪರೇಡ್) ನಡೆಯಿತು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿ, ವಿ.ಟಿ. ಸ್ವಾಮಿ ಧನ್ಯವಾದ ಸಮರ್ಪಿಸಿದರು.