ನವದೆಹಲಿ, ಅ.27: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡು ಭಾರತೀಯ ಚುನಾವಣಾ ಆಯೋಗ ಸಲ್ಲಿಸಿರುವ ಅಫಿಡವಿಟ್‌ಗೆ ಪ್ರತಿಕ್ರಿಯೆ ನೀಡಲು ಅರ್ಜಿದಾರರಿಗೆ ಸುಪ್ರೀಂ ಕೋರ್ಟ ಮಂಗಳವಾರ 10 ದಿನಗಳ ಕಾಲಾವಕಾಶ ನೀಡಿದೆ. ಮತದಾರರ ನೋಂದಣಿಗೆ ಬಳಸುವ ನಮೂನೆ-6ರಲ್ಲಿ ಅನುಮತಿಯಿಲ್ಲದೆ ಬದಲಾವಣೆ ಮಾಡಲಾಗಿದೆ ಎಂಬ ಆರೋಪದ ಕುರಿತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ಎಸ್‌ಐಆರ್ ಪ್ರಕ್ರಿಯೆಯ ಕಾನೂನುಬದ್ಧತೆ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ನಡೆಸಿತು.
ಎಸ್‌ಐಆರ್ ಪ್ರಕ್ರಿಯೆ ನಡೆಸಲು ಕಾನೂನಿನಲ್ಲಿ ಅವಕಾಶವಿದ್ದು, ಸಂಬಂಧಿಸಿದ ಆದೇಶಗಳನ್ನು ಚುನಾವಣಾ ಆಯೋಗದ ಮೂವರು ಸದಸ್ಯರೂ ಸರ್ವಾನುಮತದಿಂದ ಅನುಮೋದಿಸಿದ್ದಾರೆ ಎಂದು ಆಯೋಗ ತನ್ನ ಅಫಿಡವಿಟ್‌ನಲ್ಲಿ ಪ್ರತಿಪಾದಿಸಿದೆ.
ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ ಅನುಮೋದನೆಯಿಲ್ಲದೆ ನಮೂನೆ-6ರಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯಸಭಾ ಸದಸ್ಯೆ ದೋಲಾ ಸೇನ್ ಹೊಸ ಅರ್ಜಿ ಸಲ್ಲಿಸಿದ್ದರು.
ದೋಲಾ ಸೇನ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮನೇಕಾ ಗುರುಸ್ವಾಮಿ, ನಮೂನೆ-6ರ ಬದಲಾವಣೆಗಳಿಗೆ ಸುಪ್ರೀಂ ಕೋರ್ಟ ಅನುಮೋದನೆ ನೀಡಿದೆ ಎಂದು ಚುನಾವಣಾ ಆಯೋಗ ತಪ್ಪಾಗಿ ಹೇಳಿಕೊಂಡಿದೆ ಎಂದು ಪೀಠದ ಗಮನಕ್ಕೆ ತಂದರು. ಈ ಕುರಿತು ಎಲ್ಲ ಅಂಶಗಳನ್ನು ಪರಿಶೀಲಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
ಸೋಮವಾರ ತಡರಾತ್ರಿ ಚುನಾವಣಾ ಆಯೋಗ ಸಲ್ಲಿಸಿರುವ 248 ಪುಟಗಳ ಅಫಿಡವಿಟ್‌ಗೆ ಮರುಹೇಳಿಕೆ ಸಲ್ಲಿಸುವಂತೆ ಮೊದಲ ಅರ್ಜಿದಾರ ರಾಕೇಶ ಕುಮಾರ ಸಿಂಗ್ ಪರ ಹಾಜರಾದ ಹಿರಿಯ ವಕೀಲ ವಿಕಾಸ ಸಿಂಗ್ ಅವರಿಗೆ ಪೀಠ ಸೂಚಿಸಿತು.
ಉಪ ಚುನಾವಣಾ ಆಯುಕ್ತ ಭಾನು ಪ್ರಕಾಶ ಯೆಟೂರು ಅವರ ಮೂಲಕ ಸಲ್ಲಿಸಲಾದ ಅಫಿಡವಿಟ್‌ನಲ್ಲಿ, ನಮೂನೆ-6ಕ್ಕೆ ತಿದ್ದುಪಡಿ ಮಾಡಲಾಗಿದೆ ಎಂಬ ಆರೋಪವನ್ನು ಆಯೋಗ ತಳ್ಳಿಹಾಕಿದೆ. ಕಾನೂನಿನಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ ಸಿಂಗ್ ಸಂಧು ಹಾಗೂ ವಿವೇಕ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಆಕ್ಷೇಪಗಳನ್ನು ದಾಖಲಿಸಿದ್ದರು ಎಂದು ಸೆಪ್ಟೆಂಬರ್ 25ರಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಕೆಲವು ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೆ ಕೈಗೊಳ್ಳಲಾಗಿದೆ ಎಂಬ ಆಕ್ಷೇಪಗಳು ದಾಖಲಾಗಿದ್ದವು ಎಂದು ವರದಿ ತಿಳಿಸಿತ್ತು.
ಆದರೆ, ಇದೀಗ ಆಯೋಗದ ಅಫಿಡವಿಟ್‌ನಲ್ಲಿ ಮೂವರು ಸದಸ್ಯರೂ ಸರ್ವಾನುಮತದಿಂದ ನಿರ್ಧಾರಗಳನ್ನು ಅನುಮೋದಿಸಿದ್ದಾರೆ ಎಂದು ಪ್ರತಿಪಾದಿಸಿರುವುದು ಗಮನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಆಂತರಿಕ ನಿರ್ಧಾರ ಪ್ರಕ್ರಿಯೆಯ ಪಾರದರ್ಶಕತೆ ಕುರಿತ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂದು ಪ್ರತಿಪಕ್ಷಗಳು ಈ ಹಿಂದೆ ಆಗ್ರಹಿಸಿದ್ದವು. ಎಸ್‌ಐಆರ್ ಪ್ರಕ್ರಿಯೆಯ ಕಾನೂನುಬದ್ಧತೆ ಹಾಗೂ ಆಯೋಗದ ನಿರ್ಧಾರಗಳ ಕುರಿತು ಸಲ್ಲಿಕೆಯಾಗಿರುವ ಆಕ್ಷೇಪಣೆಗಳನ್ನು ಸುಪ್ರೀಂ ಕೋರ್ಟ ಮುಂದಿನ ವಿಚಾರಣೆಯಲ್ಲಿ ಪರಿಶೀಲಿಸಲಿದೆ.