ಅಭಿವೃದ್ಧಿಗೆ ಹಿನ್ನಡೆ: ಪಾಲಿಕೆ ಸದಸ್ಯರಿಂದ ಮುಖ್ಯ ಲೆಕ್ಕಾಧಿಕಾರಿಗೆ ತರಾಟೆ
ಬೆಳಗಾವಿ: ಹದಿನಾರನೇ ಹಣಕಾಸು ಆಯೋಗದ ಸಂಪೂರ್ಣ ಮಾಹಿತಿ ಒದಗಿಸದೇ ಅಭಿವೃದ್ಧಿಗೆ ತೊಡಕಾದ ಬೆಳಗಾವಿ ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ನಡೆ ಈಗ ಪಾಲಿಕೆ ಮೇಯರ್, ಉಪಮೇಯರ್, ಆಡಳಿತ ಪಕ್ಷದ ನಾಯಕ ಸೇರಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸದಸ್ಯರ ಕೆಂಗೆಣ್ಣಿಗೆ ಗುರಿಯಾಗಿದೆ.
ಕಳೆದ ಸೋಮವಾರ ನಡೆದ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಮೇಯರ್, ಉಪ ಮೇಯರ್ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಪಾಲಿಕೆ ಮುಖ್ಯ ಲೆಕ್ಕಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪಾಲಿಕೆಯ
16ನೇ ಹಣಕಾಸು ಆಯೋಗದ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಆಡಳಿತ ಪಕ್ಷದ ಸದಸ್ಯರಿಗೆ ಒದಗಿಸಬೇಕಿತ್ತು. ಆದರೆ, ಮಾಹಿತಿ ಕೊಡದೆ ಕಾಲಹರಣ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಇದು ಮಹಾನಗರದ ಅಭಿವೃದ್ಧಿಗೆ ಹಿನ್ನಡೆಯನ್ನುಂಟು ಮಾಡುವ ದುರುದ್ದೇಶ ಎಂದು ತರಾಟೆಗೆ ತೆಗೆದುಕೊಂಡರು.
ಉಪ ಮೇಯರ್ ಹನುಮಂತ ಕೊಂಗಾಲಿಯವರಂತೂ, ಪಾಲಿಕೆಯ 16ನೇ ಹಣಕಾಸು ಆಯೋಗದ ಮಾಹಿತಿಯನ್ನು ನೀವು
ಆಡಳಿತ ಪಕ್ಷಕ್ಕೆ ಕೊಟ್ಟಿಲ್ಲ. ಹೀಗಾಗಿ, ನಮಗೆ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಇದರಿಂದ ಕೆಲ ಸಂಘಟನೆಗಳು ಹಾಗೂ ಕೆಲವು ವ್ಯಕ್ತಿಗಳು ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ನೀವು ಮಾಡುವ ತಪ್ಪಿಗೆ ನಗರಸೇವಕರು ಹೊಣೆಯಾಗಬೇಕಿದೆ. ನಗರ ಸೇವಕರ ಸದಸ್ಯತ್ವಕ್ಕೆ ಕುತ್ತು ಬರಬೇಕೆ ಎಂದು ಮುಖ್ಯ ಲೆಕ್ಕಾಧಿಕಾರಿ ವಿರುದ್ಧ ಹರಿಹಾಯ್ದರು.
ಮೇಯರ್ ಪ್ರೀತಿ ಕಾಮಕರ್ ಮಾತನಾಡಿ, ಪ್ರತಿ ಬಾರಿಯೂ ನೀವು ಮಾಹಿತಿ ಇರದೇ ಸಭೆಗೆ ಬರುತ್ತೀರಿ, ಆದರೆ ಈಗ ಸರ್ಕಾರದಿಂದ ಬಂದ ಮಾಹಿತಿಯನ್ನೇ ಒಂದು ತಿಂಗಳಾದರೂ ನಮಗೆ ನೀಡಿಲ್ಲ ಅಂದರೆ ಹೇಗೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.