Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಸ್ತೂರಿರಂಗನ್ ವರದಿ ಯಥಾವತ್ ಜಾರಿಗೆ ಕರ್ನಾಟಕ ವಿಧಾನಸಭೆ ವಿರೋಧ

ಬೆಂಗಳೂರು, ಸೆ. 22 : ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಆಧರಿಸಿ ಕೇಂದ್ರ ಸರಕಾರ ಹೊರಡಿಸಿರುವ ಪರಿಸರ ಸೂಕ್ಷ್ಮ ಪ್ರದೇಶಗಳ (ಇಎಸ್‌ಎ) 7ನೇ ಕರಡು ಅಧಿಸೂಚನೆಯನ್ನು ಈಗಿರುವ ಸ್ವರೂಪದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ವಿಧಾನಸಭೆ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ. ಜತೆಗೆ, ಸರ್ವೆ ನಂಬರ್ ಆಧಾರದಲ್ಲಿ ಖುದ್ದು ಸಮೀಕ್ಷೆ ನಡೆಸಿ ಪರಿಸರ ಸೂಕ್ಷ್ಮ ಪ್ರದೇಶಗಳ ಗಡಿ ಗುರುತಿಸಲು ಒಂದು ವರ್ಷದ ಕಾಲಾವಕಾಶ ನೀಡುವಂತೆ ಕೇಂದ್ರ ಸರಕಾರವನ್ನು ಕೋರಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಂಗಳವಾರ ಸದನದಲ್ಲಿ ನಿರ್ಣಯ ಮಂಡಿಸಿದರು. ಪಶ್ಚಿಮ ಘಟ್ಟಗಳು ರಾಜ್ಯದ ಅಮೂಲ್ಯ ನೈಸರ್ಗಿಕ ಸಂಪತ್ತಾಗಿದ್ದು, ಜೀವವೈವಿಧ್ಯ ಹಾಗೂ ಪರಿಸರ ಸಮತೋಲನಕ್ಕೆ ಅವುಗಳ ಸಂರಕ್ಷಣೆ ಅಗತ್ಯ. ಆದರೆ ಪರಿಸರ ರಕ್ಷಣೆಯ ಹೆಸರಿನಲ್ಲಿ ಅಲ್ಲಿನ ಜನರ ಜೀವನೋಪಾಯ, ಕೃಷಿ ಹಾಗೂ ವಸತಿ ಹಕ್ಕುಗಳಿಗೆ ಧಕ್ಕೆಯಾಗಬಾರದು ಎಂಬ ನಿಲುವನ್ನು ಸರಕಾರ ವ್ಯಕ್ತಪಡಿಸಿದೆ.

ಕೇಂದ್ರದ ಕರಡು ಅಧಿಸೂಚನೆಯಲ್ಲಿ ಅರಣ್ಯ ಪ್ರದೇಶಗಳೊಂದಿಗೆ ಕೃಷಿ ಭೂಮಿ, ತೋಟಗಳು, ಮನೆಗಳು ಮತ್ತು ಸಾರ್ವಜನಿಕ ಬಳಕೆಯ ಪ್ರದೇಶಗಳೂ ಇಎಸ್‌ಎ ವ್ಯಾಪ್ತಿಗೆ ಸೇರುವ ಆತಂಕವಿದೆ. ಕೇವಲ ಉಪಗ್ರಹ ದತ್ತಾಂಶವನ್ನು ಆಧರಿಸಿ ಗಡಿ ಗುರುತಿಸುವ ಬದಲು ಸ್ಥಳಕ್ಕೆ ತೆರಳಿ ಭೌತಿಕ ಸಮೀಕ್ಷೆ ನಡೆಸಿ, ಪ್ರತಿ ಸರ್ವೆ ನಂಬರ್ ಆಧಾರದಲ್ಲಿ ಅರಣ್ಯ, ಕೃಷಿ, ತೋಟ ಮತ್ತು ಜನವಸತಿ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ಈಗಾಗಲೇ ಮಂಜೂರಾಗಿರುವ ಭೂಮಿ, ಕೃಷಿ ಮತ್ತು ತೋಟದ ಪ್ರದೇಶಗಳು, ಮಾನವ ವಸತಿ ಹಾಗೂ ಸಾರ್ವಜನಿಕ ಬಳಕೆಯ ಪ್ರದೇಶಗಳನ್ನು ಇಎಸ್‌ಎ ವ್ಯಾಪ್ತಿಯಿಂದ ಹೊರಗಿಡಬೇಕು. ಅಧಿಸೂಚಿತ ಅರಣ್ಯ ಹಾಗೂ ವಾಸ್ತವ ಅರಣ್ಯ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿದ ಬಳಿಕವೇ ಅಂತಿಮ ಗಡಿ ನಿಗದಿಪಡಿಸಬೇಕು ಎಂಬುದು ರಾಜ್ಯದ ನಿಲುವಾಗಿದೆ.

ಇದೇ ವೇಳೆ ಬಗರ್ ಹುಕುಂ ಸಾಗುವಳಿ, ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಹಕ್ಕು ಕೋರಿಕೆಗಳು, ಡೀಮ್ಡ್ ಅರಣ್ಯ, ಭೂ ಮಂಜೂರಾತಿ, ಮೇಲ್ಮನವಿಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇಎಸ್‌ಎ ಗಡಿ ನಿರ್ಧರಿಸುವ ಮೊದಲು ಪರಿಗಣಿಸಬೇಕು ಎಂದು ವಿಧಾನಸಭೆ ಆಗ್ರಹಿಸಿದೆ. ಗ್ರಾಮದ ಒಂದು ಭಾಗ ಅರಣ್ಯ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣಕ್ಕೆ ಇಡೀ ಗ್ರಾಮವನ್ನೇ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸುವ ವಿಧಾನಕ್ಕೂ ಆಕ್ಷೇಪ ವ್ಯಕ್ತವಾಗಿದೆ.

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ

ಕಸ್ತೂರಿರಂಗನ್ ವರದಿಯಲ್ಲಿರುವ ನ್ಯೂನತೆಗಳು ಹಾಗೂ ಸ್ಥಳೀಯರ ಆತಂಕಗಳನ್ನು ಸಮಗ್ರವಾಗಿ ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಸರಕಾರ ನಿರ್ಧರಿಸಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು, ರೈತರ ಪ್ರತಿನಿಧಿಗಳು, ಕೈಗಾರಿಕಾ ವಲಯದ ಪ್ರತಿನಿಧಿಗಳು, ಪರಿಸರ ಹಾಗೂ ಅರಣ್ಯ ವಿಷಯಗಳ ತಜ್ಞರು ಮತ್ತು ವಿಜ್ಞಾನಿಗಳನ್ನು ಸಮಿತಿಯಲ್ಲಿ ಸೇರಿಸುವ ಪ್ರಸ್ತಾಪವಿದೆ.

ಸಮಿತಿಯು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಲಿದೆ. ಅರಣ್ಯದ ಗಡಿ, ಕೃಷಿ ಭೂಮಿ, ತೋಟ, ಜನವಸತಿ ಹಾಗೂ ಇತರ ಪ್ರದೇಶಗಳನ್ನು ಸರ್ವೆ ನಂಬರ್ ಆಧಾರದಲ್ಲಿ ಗುರುತಿಸಿ ಸರಕಾರಕ್ಕೆ ವರದಿ ನೀಡಲಿದೆ. ಅದರ ಶಿಫಾರಸುಗಳ ಆಧಾರದಲ್ಲಿ ಕೇಂದ್ರ ಸರಕಾರಕ್ಕೆ ಪರ್ಯಾಯ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಉದ್ದೇಶಿಸಿದೆ.

ಸ್ಥಳೀಯ ಜನರ ಅಭಿಪ್ರಾಯಕ್ಕೂ ಆದ್ಯತೆ ನೀಡಲು ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡ ಗ್ರಾಮ ಪಂಚಾಯತ್ ಮಟ್ಟದ ಸಮಿತಿಗಳನ್ನು ರಚಿಸುವ ಪ್ರಸ್ತಾಪವಿದೆ. ಈ ಸಮಿತಿಗಳು ಸ್ಥಳೀಯ ಸಮಸ್ಯೆಗಳು, ಭೂ ದಾಖಲೆಗಳು ಹಾಗೂ ಜನರ ಆಕ್ಷೇಪಣೆಗಳನ್ನು ರಾಜ್ಯಮಟ್ಟದ ಸಮಿತಿಗೆ ತಲುಪಿಸಲು ನೆರವಾಗಲಿವೆ.

ರೈತರು, ಕಾರ್ಮಿಕರಿಗೆ ನೆರವಿನ ಬೇಡಿಕೆ

ಪರಿಸರ ಸೂಕ್ಷ್ಮ ಪ್ರದೇಶದ ನಿರ್ಬಂಧಗಳಿಂದ ಜೀವನೋಪಾಯಕ್ಕೆ ಧಕ್ಕೆಯಾಗುವ ರೈತರು ಮತ್ತು ಕಾರ್ಮಿಕರಿಗೆ ಪರ್ಯಾಯ ಜೀವನೋಪಾಯದ ಅವಕಾಶ ಹಾಗೂ ಅಗತ್ಯ ಆರ್ಥಿಕ ನೆರವು ಒದಗಿಸಲು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕೆಂದೂ ರಾಜ್ಯ ಒತ್ತಾಯಿಸಿದೆ.

ಖುದ್ದು ಸಮೀಕ್ಷೆ, ಸರ್ವೆ ನಂಬರ್ ಆಧಾರಿತ ಗಡಿ ಗುರುತಿಸುವಿಕೆ ಹಾಗೂ ತಜ್ಞರ ಸಮಿತಿಯ ಪರಿಶೀಲನೆ ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೆ ಕರ್ನಾಟಕಕ್ಕೆ ಸಂಬಂಧಿಸಿದ ಇಎಸ್‌ಎ ಅಧಿಸೂಚನೆಯನ್ನು ಅಂತಿಮಗೊಳಿಸಬಾರದು ಎಂದು ಕೇಂದ್ರವನ್ನು ಕೋರಲು ನಿರ್ಧರಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸುವ ಮುನ್ನ ಕೇಂದ್ರ ಸರಕಾರ ರಾಜ್ಯದೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಬೇಕೆಂಬ ಬೇಡಿಕೆಯನ್ನೂ ನಿರ್ಣಯದಲ್ಲಿ ಸೇರಿಸಲಾಗಿದೆ.

ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಜತೆಗೆ ಅಲ್ಲಿನ ಜನರ ಹಕ್ಕು ಮತ್ತು ಜೀವನೋಪಾಯವನ್ನೂ ರಕ್ಷಿಸಬೇಕು ಎಂಬ ನಿಲುವಿನೊಂದಿಗೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ನಿರ್ಣಯಕ್ಕೆ ಒಮ್ಮತದ ಬೆಂಬಲ ನೀಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ