LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಒಂದು ಸುತ್ತು....ಋತುಚಕ್ರ ರಜೆಯ ಸುತ್ತ

 

ಋತು ಕ್ರಿಯೆಯನ್ನು ಹೊಂದಿರುವ 18 ವರ್ಷದಿಂದ 52 ವರ್ಷ ವಯಸ್ಸಿನ ಮಹಿಳಾ ಸರ್ಕಾರಿ ನೌಕರರಿಗೆ ಋತುಚಕ್ರ ರಜೆಯನ್ನು ಮಂಜೂರು ಮಾಡಿದ ಆದೇಶ ನಿನ್ನೆ ಹೊರಬಿದ್ದಿದ್ದು ಮಹಿಳೆಯರು ತಿಂಗಳಿಗೆ ಒಂದು ರಜೆಯಂತೆ ವರ್ಷಕ್ಕೆ ಒಟ್ಟು 12 ರಜೆಗಳನ್ನು ಪಡೆಯಬಹುದಾಗಿದೆ.

ಸರ್ಕಾರಿ ನೌಕರರಿಗೆ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವೇ ಈ ರಜೆಯನ್ನು ಕೂಡ ಮಂಜೂರು ಮಾಡುತ್ತಿದ್ದು ಈ ರಜೆಯನ್ನು ಪಡೆಯಲು ಯಾವುದೇ ರೀತಿಯ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡುವ ಅವಶ್ಯಕತೆ ಇಲ್ಲ ಹಾಗೂ ಈ ರಜೆಯನ್ನು ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು ಎಂದು ಆರ್ಥಿಕ ಇಲಾಖೆಯು ಆದೇಶ ಹೊರಡಿಸಿದೆ.

ರಾಜ್ಯದ ಔದ್ಯೋಗಿಕ ವಲಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡುವ ಕುರಿತ ಸರ್ಕಾರದ ನಿರ್ಣಯ ಕೆಲ ದಿನಗಳ ಹಿಂದೆ ಹೊರಬಿದ್ದಾಗ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದವು.

ಅತ್ಯಂತ ಸಣ್ಣ ಹಾಗೂ ಕಿರುಗಾತ್ರದ ಉದ್ಯಮ ವಲಯಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಉದ್ಯಮಿಗಳು ವೇತನ ಸಹಿತವಾಗಿ ಕೊಡಲ್ಪಡುವ ಈ ರಜೆಯು ತಮಗೆ ಆರ್ಥಿಕ ಹೊರೆಯನ್ನು ಹಾಗೂ ಕೆಲಸದ ಹೊರೆಯನ್ನು ಹೆಚ್ಚಿಸುವುದರ ಜೊತೆ ಜೊತೆಗೆ ಇರುವ ಕೆಲವೇ ಜನ ಮಹಿಳಾ ಕೆಲಸಗಾರರಲ್ಲಿ ಒಂದೇ ದಿನ ಬಹಳಷ್ಟು ಜನ ಮುಟ್ಟಿನ ರಜೆಯನ್ನು ಪಡೆದಾಗ ಉಂಟಾಗುವ ತೊಂದರೆಯ ಕುರಿತು, ಅದೂ ತಮ್ಮಂತಹ ಸಣ್ಣಪುಟ್ಟ ಔದ್ಯೋಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಉದ್ಯಮಿಗಳಿಗೆ ಹೊಡೆತವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ಕೆಲಸಗಾರರ ಕೊರತೆಯಿಂದ ತಾವು ಪಡೆದುಕೊಂಡ ಆರ್ಡರಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವ ನಿಟ್ಟಿನಲ್ಲಿ ತಾವು ವಿಫಲರಾಗುವ ಶಂಕೆಯನ್ನು ಅವರು ವ್ಯಕ್ತಪಡಿಸಿದರು.

ಧಾರ್ಮಿಕವಾಗಿ, ಸಾಂಪ್ರದಾಯಿಕವಾಗಿ ಮತ್ತು ಸಾಮಾಜಿಕವಾಗಿ ಮುಟ್ಟನ್ನು ಅಷ್ಟೇನೂ ಸರಳವಾಗಿ ಒಪ್ಪಿಕೊಳ್ಳದ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ
ಮುಟ್ಟಿನ ಸಂದರ್ಭದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ತೊಂದರೆಗಳ ಕುರಿತು ಅಸಡ್ಡೆ ಮಾಡುವುದು ಸಹಜವಾಗಿ ಹೋಗಿತ್ತು. ಕೆಲವರ ಪಾಲಿಗೆ ಮುಟ್ಟು ಎಂಬುದು ಹೀಗೆ ಬಂದು ಹಾಗೆ ಹೋಗುವ ನೈಸರ್ಗಿಕ ಕ್ರಿಯೆ ಆದರೆ ಮತ್ತೆ ಕೆಲವರಿಗೆ ಈ ಹೆಣ್ಣು ಜೀವನವೇ ಸಾಕಪ್ಪ ಎಂದು ಹಲುಬುವಂತಹ
ತೊಂದರೆಯನ್ನು ಉಂಟುಮಾಡುತ್ತದೆ. ಪ್ರತಿಯೊಬ್ಬರ ದೈಹಿಕ ಪ್ರಕೃತಿಯು ವಿಭಿನ್ನವಾಗಿದ್ದು ಇದನ್ನು ಬೇರೆಯವರಿಗೆ ಹೋಲಿಸುವುದು ಅಷ್ಟೇನೂ ಸಮಂಜಸ ಅಲ್ಲ.

ಈ ಸಮಯದಲ್ಲಿ ಹೆಣ್ಣು ಮಕ್ಕಳು ದೈಹಿಕವಾಗಿ ಹಲವಾರು ತೊಂದರೆಗಳನ್ನು ಅನುಭವಿಸುವುದರ ಜೊತೆ ಜೊತೆಗೆ ಮಾನಸಿಕ ಮತ್ತು ಭಾವನಾತ್ಮಕ ಒತ್ತಡದಿಂದ ಬಳಲುತ್ತಾರೆ. ದೈಹಿಕ ತೊಂದರೆಗಳಾದ ಬೆನ್ನು ನೋವು, ಹೊಟ್ಟೆ ನೋವು, ಕಿಬ್ಬೊಟ್ಟೆ ನೋವು, ಕಾಲುಗಳಲ್ಲಿ ಸೆಳೆತ, ವಿಪರೀತ ರಕ್ತಸ್ರಾವಗಳು ಆಕೆಗೆ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಇದರ ಮಧ್ಯದಲ್ಲಿ ಶಾಲೆ ಕಾಲೇಜುಗಳಲ್ಲಿ, ಔದ್ಯೋಗಿಕ ವಲಯಗಳಲ್ಲಿ ಉಳಿದ ದಿನಗಳಂತೆ ತೊಡಗಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಕೆಲ ಹೆಣ್ಣು ಮಕ್ಕಳಿಗೆ ಇರುತ್ತದೆ. ಅದರಲ್ಲೂ ದೈಹಿಕವಾಗಿ ಅಶಕ್ತತೆ, ರಕ್ತಹೀನತೆಯನ್ನು ಅನುಭವಿಸುವವರು ಸೂಕ್ಷ್ಮವಾದ ಆರೋಗ್ಯ ಪರಿಸ್ಥಿತಿ ಉಳ್ಳವರು ಮತ್ತಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ಇನ್ನೂ ಕೆಲ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವಿನ ಕಾರಣದಿಂದ ಹೊಟ್ಟೆಯ ನುಲಿತದಿಂದ ವಿಪರೀತ ರಕ್ತಸ್ರಾವದಿಂದ ವಾಂತಿಯಾಗುವ ಸಂಭವಗಳು ಕೂಡ ಉಂಟು. ಮತ್ತೆ ಕೆಲವರು ವಾಕರಿಕೆ, ತಲೆನೋವು ಮುಂತಾದ ತೊಂದರೆಗಳಿಂದ ಬಳಲುತ್ತಾರೆ. ಎಲ್ಲರಿಗೂ ಹೀಗೆಯೇ ಆಗಬೇಕೆಂದಿಲ್ಲ ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ.... ಅಂತೆಯೇ ಅವರ ದೈಹಿಕ ಪ್ರಕ್ರಿಯೆಗಳು ಕೂಡ.

ವಿದೇಶಗಳಲ್ಲಿ ಮುಟ್ಟಿನ ಕುರಿತು ನಿಸ್ಸಂಕೋಚವಾಗಿ ಮಾತನಾಡದೆ ಹೋದರೂ ತೀರಾ ಮಡಿವಂತಿಕೆ ಇಲ್ಲ. ಆದರೆ ಸಾಂಪ್ರದಾಯಿಕ ಭಾರತ ದೇಶದಲ್ಲಿ ಮುಟ್ಟನ್ನು ಮಹಾಪರಾಧ ಎಂಬಂತೆ ಭಾವಿಸುವ ಕಾರಣ ಇಲ್ಲಿ ಮುಟ್ಟಿನ ಕುರಿತು ಗಂಡಸರು ಬಿಡಿ...ಹೆಣ್ಣು ಮಕ್ಕಳು ಕೂಡ ಪರಸ್ಪರರ ಜೊತೆ ಮಾತನಾಡುವ, ಚರ್ಚಿಸುವ, ಹಂಚಿಕೊಳ್ಳುವ ಸಾಧ್ಯತೆಗಳು ಕಡಿಮೆ.

ಮುಟ್ಟಿನ ಸಮಯದಲ್ಲಿ ಧರಿಸುವ ಪ್ಯಾಡ್ ಗಳನ್ನು ಖರೀದಿಸುವ ಸಮಯದಲ್ಲಿ ಕೂಡ ಮುಜುಗರವನ್ನು ಅನುಭವಿಸುವ ಹೆಣ್ಣುಮಕ್ಕಳು ನಮ್ಮಲ್ಲಿದ್ದಾರೆ. ಔಷಧಿ ಅಂಗಡಿಗಳಲ್ಲಿ ಅತ್ಯಂತ ಇನಿ ದನಿಯಲ್ಲಿ ಪ್ಯಾಡ್ಗಳನ್ನು ಖರೀದಿಸುವ ಹೆಣ್ಣು ಮಕ್ಕಳು ಪೇಪರಿನಲ್ಲಿ ಸುತ್ತಿ ಅದಕ್ಕೆ ಕಪ್ಪು ಬಣ್ಣದ ಕವರನ್ನು ಹಾಕಿ ಅಂಗಡಿಯಾತ ಅದನ್ನು ಕೊಟ್ಟ ಕೂಡಲೇ ತಮ್ಮ ಬ್ಯಾಗಿನ ಮೂಲೆಯಲ್ಲಿ ತುರುಕಿ ತರುವ ಅವರು ಮನೆಯಲ್ಲಿ ಕೂಡ ಮಕ್ಕಳ ಮತ್ತು ಮನೆಯ ಗಂಡಸರ ಕಣ್ಣಿಗೆ ಕಾಣದಂತೆ ಮರೆಯಾಗಿ ಇಡುತ್ತಾರೆ.

ಇಂದಿಗೂ ಕೂಡ 23 ಲಕ್ಷಕ್ಕೂ ಹೆಚ್ಚು ಜನ ಮಹಿಳೆಯರು ನಮ್ಮ ರಾಜ್ಯದಲ್ಲಿ ಮುಟ್ಟಿನ ಸಮಯದಲ್ಲಿ ಬಟ್ಟೆಯ ಪ್ಯಾಡ್ ಗಳನ್ನು ಬಳಸುತ್ತಾರೆ.
ಬಟ್ಟೆಯ ಪ್ಯಾಡ್ ಗಳನ್ನು ಗುಟ್ಟಾಗಿ ಒಗೆದು ಯಾರಿಗೂ ಕಾಣದ ಮೂಲೆಯಲ್ಲಿ ಹರವುವ ಕಾರಣ ಅವುಗಳನ್ನು ವೈಜ್ಞಾನಿಕವಾಗಿ ಹೈಜೀನಿಕ್ ಎಂದು ಹೇಳಲು ಹಾಗೂ ಭಾವಿಸಲು ಸಾಧ್ಯವಾಗುವುದಿಲ್ಲ.

ಇನ್ನು ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ಪ್ಯಾಡ್ ಗಳು ಸುರಕ್ಷಿತವಲ್ಲ. ಎಷ್ಟೋ ಬಾರಿ ಅವೈಜ್ಞಾನಿಕವಾಗಿ ರಾಸಾಯನಿಕಗಳನ್ನು ಬಳಸಿ ತಯಾರಿಸಲ್ಪಟ್ಟ ಪ್ಯಾಡುಗಳನ್ನು ಬಳಸಿದ ಕಾರಣದಿಂದ ಮಹಿಳೆಯರು ವಿವಿಧ ಬಗೆಯ ಸೋಂಕುಗಳಿಗೆ ತುತ್ತಾಗಿ ಒದ್ದಾಡಿರುವುದು ಉಂಟು. ಗರ್ಭ ಕೊರಳಿನ ಕ್ಯಾನ್ಸರ್ ಗೆ ತುತ್ತಾಗಿರುವ ಸಾಧ್ಯತೆಗಳು ಕೂಡ ಹೆಚ್ಚು.

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಪ್ಯಾಡ್ ಗಳನ್ನು ಧರಿಸಲು, ಬದಲಿಸಲು ಹಾಗೂ ಪದೇ ಪದೇ ನಿಸರ್ಗದ ಕರೆಗೆ ಓಗೊಡುವ ಅನಿವಾರ್ಯತೆ ಇರುವ ಕಾರಣ ಶೌಚಾಲಯಗಳು ಬೇಕೇ ಬೇಕು. ಆದರೆ ಭಾರತದಂತಹ ಜನನಿಬಿಡ ದೇಶದಲ್ಲಿ ಯಾವುದೇ ಸರಕಾರಿ, ಅರೆ ಸರಕಾರಿ ಕಚೇರಿಗಳಲ್ಲಿಯಾಗಲಿ ಖಾಸಗಿ ವಲಯದ ಸಣ್ಣಪುಟ್ಟ ಕಚೇರಿಗಳಲ್ಲಿ ಕಾರ್ಖಾನೆಗಳಲ್ಲಿ ಸುಸಜ್ಜಿತವಾದ ಶೌಚಾಲಯಗಳು ದೊರೆಯುವುದಿಲ್ಲ. ಅಕಸ್ಮಾತ್ ಶೌಚಾಲಯಗಳು ಇದ್ದರೂ ಕೂಡ ಅವು ಹೆಸರಿಗೆ ಮಾತ್ರ ಶೌಚಾಲಯಗಳಾಗಿದ್ದು ಯಾವುದೇ ರೀತಿಯ ನಿರ್ವಹಣೆ ಇಲ್ಲದೆ, ನೀರಿನ ವ್ಯವಸ್ಥೆ ಇಲ್ಲದೆ ಗಬ್ಬು ನಾರುತ್ತಾ ರೋಗವನ್ನು ಹರಡುವ ಕೂಪಗಳಾಗಿರುತ್ತವೆ. ಇಂತಹ ಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಗಂಟೆಗಟ್ಟಲೆ ಕುಳಿತು ನಿಂತು ನೆಮ್ಮದಿಯಿಂದ ಕೆಲಸ ಮಾಡುವ ಹಾಗೂ ಇಲ್ಲ. ಹೆಚ್ಚಿನ ರಕ್ತಸ್ರಾವವಾದರೆ ಪ್ಯಾಡ್ ಗಳನ್ನು ಬದಲಾಯಿಸಲು, ವಿಪರೀತ ನೋವಿನ ತೊಂದರೆಯ ಅನುಭವವಾದರೆ ಒಂದರ್ಧ ಗಂಟೆ ವಿಶ್ರಾಂತಿ ತೆಗೆದುಕೊಳ್ಳಲು ವಿಶ್ರಾಂತಿ ಕೋಣೆಗಳಾಗಲಿ ಇರದೇ ಹೋಗುವ ಕಾರಣ ಹೆಣ್ಣು ಮಕ್ಕಳು ವಿಪರೀತ ತೊಂದರೆಯನ್ನು ಅನುಭವಿಸುತ್ತಾರೆ.

ಇನ್ನು ದೂರದ ಊರಿನಲ್ಲಿರುವ, ಸ್ಥಳಗಳಲ್ಲಿರುವ ತಮ್ಮ ಕಚೇರಿಗಳಿಗೆ ಓಡಾಡುವ ಹೆಣ್ಣು ಮಕ್ಕಳು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುವಲ್ಲಿ ಮುಟ್ಟಿನ ತೊಂದರೆಯ ಕಾರಣ ಅಸಹಾಯಕತೆಯನ್ನು ಎದುರಿಸುತ್ತಾರೆ. ಇದು ಅವರ ದೈಹಿಕ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಹಾನಿಕರ.

ಶಾಲಾ ಕಾಲೇಜುಗಳ ಮಟ್ಟದಲ್ಲಿ ಇರುವ ಹೆಣ್ಣು ಮಕ್ಕಳು ಹೇಳದೆ ಕೇಳದೆ ಬರುವ ಅನಿಯಮಿತ ಅತಿಥಿಯಾಗಿರುವ ಮುಟ್ಟನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಎರಡು ಮೂರು ದಿನಗಳ ಕಾಲ ಶಾಲೆ ಕಾಲೇಜುಗಳಿಗೆ ಹೋಗುವುದೇ ಇಲ್ಲ.
ಈ ಎಲ್ಲ ತೊಂದರೆಗಳನ್ನು ಮನಗಂಡ ಸರ್ಕಾರವು ಈಗಾಗಲೇ ಕೇರಳ ಒರಿಸ್ಸಾ ಹಾಗೂ ಬಿಹಾರ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಮುಟ್ಟಿನ ರಜೆಯನ್ನು ನಮ್ಮ ರಾಜ್ಯದಲ್ಲಿಯೂ ಜಾರಿಗೊಳಿಸಿರುವುದು ಅಭಿನಂದನಾರ್ಹ ವಿಷಯ. 18 ರಿಂದ 52 ವರ್ಷ ವಯಸ್ಸಿನ ಸರ್ಕಾರಿ ನೌಕರರಿಗೆ ವೇತನ ಸಹಿತ ಮುಟ್ಟಿನ ರಜೆಯನ್ನು ಮಂಜೂರು ಮಾಡಿರುವುದು ಸ್ವಾಗತಾರ್ಹ ಆದರೆ ಇದೇ ಮಾದರಿಯನ್ನು ಖಾಸಗಿಯವರು ನಿಭಾಯಿಸುವುದು ಸಾಧ್ಯವಿಲ್ಲ ಎಂಬ ಶಂಕೆ ಸರ್ಕಾರಕ್ಕೆ ಇದ್ದು ಬಹುಶಹ ಆ ಕಾರಣಕ್ಕೆ ಖಾಸಗಿ ವಲಯದವರ ಮೇಲೆ ಯಾವುದೇ ರೀತಿಯ ಒತ್ತಡವನ್ನು ಅವರು ಹೇರಿಲ್ಲ.

ಕುಟುಂಬದಲ್ಲಿ ಅರ್ಥಿಕ ಮತ್ತು ಕೌಟುಂಬಿಕ ಜವಾಬ್ದಾರಿಯನ್ನು ನಿಭಾಯಿಸುವ ಉದ್ಯೋಗಸ್ಥ ಮಹಿಳೆಯರು ಋತುಚಕ್ರದ ಸಮಯದಲ್ಲಾಗುವ ತೊಂದರೆಗಳನ್ನು ಮತ್ತು ಬದಲಾದ ಜೀವನ ಶೈಲಿಯಿಂದ ಆಗುತ್ತಿರುವ ಹಲವಾರು ಸ್ತ್ರೀರೋಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇದರೊಂದಿಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರಿಗೆ...ಅದರಲ್ಲೂ ಅತಿ ಅವಶ್ಯಕವಿರುವ ವಿದ್ಯಾರ್ಥಿನಿಯರಿಗೆ ರಜೆ ಪಡೆದುಕೊಳ್ಳುವ ಅವಕಾಶವನ್ನು ನೀಡಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ.. ದೈಹಿಕವಾಗಿ ಹೆಣ್ಣು ಮಕ್ಕಳಲ್ಲಿ ಆ ದಿನಗಳಲ್ಲಿ ಉಂಟಾಗುವ ಮನೋದೈಹಿಕ ತೊಂದರೆಗಳನ್ನು ಎದುರಿಸಲು ಈ ರಜೆಯ ಅವಶ್ಯಕತೆ ಅವರಿಗೆ ಇದೆ ಎಂಬುದು ಅವರ ಅಭಿಪ್ರಾಯ. ಇದು ಬಹುಮಟ್ಟಿಗೆ ನಿಜವು ಕೂಡ.

ಅದರಲ್ಲೂ ಕೊರೊನ ನಂತರ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ದೊರೆಯುತ್ತಿದ್ದ ಸ್ಯಾನಿಟರಿ ಪ್ಯಾಡ್ ಗಳು ಕೂಡ ಲಭ್ಯವಾಗದೆ ಇರುವುದು, ಬಟ್ಟೆಯ ಪ್ಯಾಡ್ ನಲ್ಲಿ ಬಹಳ ಹೊತ್ತು ಇರಲು ಸಾಧ್ಯವಾಗದೇ ಇರುವ ತೊಂದರೆಗಳು ಹೆಣ್ಣು ಮಕ್ಕಳನ್ನು ಕಾಡುತ್ತವೆ. ಪರಿಣಾಮವಾಗಿ 12 ರಿಂದ 15 ಶೇಕಡ ಹೆಣ್ಣು ಮಕ್ಕಳು ಆ ಸಮಯದಲ್ಲಿ ಶಾಲೆಗೆ ಬರುವುದೇ ಇಲ್ಲ. ಇನ್ನುಳಿದ ಐದರಿಂದ ಏಳು ಶೇಕಡ ಹೆಣ್ಣು ಮಕ್ಕಳು ಅನಿವಾರ್ಯವಾಗಿ ಶಾಲೆ ಕಾಲೇಜುಗಳಿಗೆ ಹಾಜರಾಗುತ್ತಾರೆ.

ಮುಂದಿನ ದಿನಮಾನಗಳಲ್ಲಿ ಋತುಚಕ್ರದ ಸಮಯದ ನಿರ್ವಹಣೆಯನ್ನು ಮಾಡುವ ಕಡ್ಡಾಯ ಶಿಕ್ಷಣ ವ್ಯವಸ್ಥೆಯ ಹೆಣ್ಣು ಮಕ್ಕಳಿಗೆ ದೊರೆಯಬೇಕು. ನೈಸರ್ಗಿಕ ವಸ್ತುಗಳಿಂದ ಮಾಡಲ್ಪಟ್ಟ ಜೈವಿಕವಾಗಿ ವಿಘಟನೆ ಮಾಡಲು ಸಾಧ್ಯವಾಗುವಂತಹ ಸ್ಯಾನಿಟರಿ ಪ್ಯಾಡ್ ಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು. ಮುಟ್ಟಿನ ಸಮಯದಲ್ಲಿ ಪೌಷ್ಟಿಕ ಆಹಾರದ ಸೇವನೆಯ ಅವಶ್ಯಕತೆಯನ್ನು ದೈಹಿಕ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಶಿಕ್ಷಣವನ್ನು ನೀಡಬೇಕು. ಆರೋಗ್ಯವಂತ ಸಮಾಜಕ್ಕೆ ಮಾನಸಿಕವಾಗಿ ದೈಹಿಕವಾಗಿ ಭಾವನಾತ್ಮಕವಾಗಿ ಆರೋಗ್ಯವಂತ ಸ್ತ್ರೀ ಸಮುದಾಯದ ಅವಶ್ಯಕತೆ ಇದೆ ಆ ಭಾವನಾತ್ಮಕ ಬೆಂಬಲವನ್ನು ನೀಡುವ ಕರ್ತವ್ಯ ಸಮಾಜದ ಎಲ್ಲ ಪುರುಷ ವರ್ಗದ ಜವಾಬ್ದಾರಿ ಈ ನಿಟ್ಟಿನಲ್ಲಿ ಎಲ್ಲರೂ ತಂತಮ್ಮ ಕರ್ತವ್ಯಗಳನ್ನು ನಿರ್ವಹಿಸಲಿ ಎಂಬ ಆಶಯದೊಂದಿಗೆ

ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು