ವಿಜಯನಗರ : ಹಂಪಿ ಉತ್ಸವದ ಕೊನೆಯ ದಿನದ ಸಂಭ್ರಮದ ಮಧ್ಯೆ ಗಲಾಟೆಯೊಂದು ನಡೆಯಿದ್ದು, ಖ್ಯಾತ ಚಿತ್ರನಟಿ ರಚಿತಾ ರಾಮ್ ಅವರ ಡ್ರೈವರ್ ವಿಜಯನಗರ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವರ ಕಣ್ಣಿಗೆ ಮುಷ್ಟಿ ಮಾಡಿ ಗುದ್ದಿದ ಘಟನೆ ವರದಿಯಾಗಿದೆ.
https://youtu.be/xmtd7LmxKhk?si=KaCNipluF_tJl-8A
ಎಂ.ಪಿ. ಪ್ರಕಾಶ ವೇದಿಕೆಯ ಬಳಿ ಈ ಘಟನೆ ಸಂಭವಿಸಿದ್ದು, ರವಿಕುಮಾರ್ ಅವರ ಕಣ್ಣಿನ ಭಾಗಕ್ಕೆ ಮುಷ್ಟಿಯಿಂದ ಗುದ್ದಿದ ಪರಿಣಾಮ ಅವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಭದ್ರತಾ ಕಾರಣಗಳನ್ನು ಮುಂದಿಟ್ಟು ಜನಸಾಮಾನ್ಯರೊಂದಿಗೆ ದುರ್ವರ್ತನೆ ಮಾಡಿದಂತೆ ಆರೋಪ ಕೇಳಿಬಂದಿದೆ. ಡ್ರೈವರ್ ಗುಂಡಾಗಳ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ಸ್ಥಳದಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ನಂತರ ಸ್ಥಳಕ್ಕೆ ಜನರು ಗುಂಪುಗೂಡಿದ್ದು, ಉಂಟಾದ ಗಲಾಟೆಯ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಕಾರಿನಿಂದ ಡ್ರೈವರ್ ಇಳಿದು ಬಂದು ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕೂಡ ಲಭ್ಯವಿರುವುದಾಗಿ ತಿಳಿದುಬಂದಿದೆ.
ಹಲ್ಲೆ ಸಂಬಂಧಿಸಿದಂತೆ ಗಾಯಗೊಂಡ ರವಿಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಪ್ರಕರಣದ ಕುರಿತು ವಿಜಯನಗರ ಜಿಲ್ಲಾ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ. ಹಂಪಿ ಉತ್ಸವದಂತಹ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಂಪಿ ಉತ್ಸವದಂತಹ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇಂತಹ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದ್ದು, ಕಾರ್ಯಕ್ರಮದ ಭದ್ರತೆ ಮತ್ತು ವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಘಟನೆಯ ಬಳಿಕ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಈ ಸಂಬಂಧ ವಿಜಯನಗರ ಜಿಲ್ಲಾ ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ಸಾಕ್ಷಿಗಳ ಹೇಳಿಕೆಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಹಲ್ಲೆಗೆ ಕಾರಣ ತಿಳಿದುಬಂದಿಲ್ಲ.