ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾದ ಬೆನ್ನಲ್ಲೇ, ಅಪ್ರಾಪ್ತ ವಯಸ್ಸಿನ ಮಕ್ಕಳು ದ್ವಿಚಕ್ರ ವಾಹನ, ಸ್ಕೂಟರ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು (EV) ರಸ್ತೆಗಳಲ್ಲಿ ಅತಿ ವೇಗವಾಗಿ ಚಲಾಯಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಪೋಷಕರು ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ಪೊಲೀಸ್ ಇಲಾಖೆ ಕಟ್ಟುನಿಟ್ಟಾದ ಸೂಚನೆ ನೀಡಿದೆ.
18 ವರ್ಷ ತುಂಬದ ಮಕ್ಕಳು ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದೆ. ಮಕ್ಕಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಪೋಷಕರು ಯಾವುದೇ ಕಾರಣಕ್ಕೂ ಅವರಿಗೆ ವಾಹನಗಳನ್ನು ನೀಡಬಾರದು. ಒಂದು ವೇಳೆ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಲ್ಲಿ, ವಾಹನ ಮಾಲೀಕರು ಮತ್ತು ಪಾಲಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
ಪಾಲಕರು ಗಮನಿಸಬೇಕಾದ ಅಂಶಗಳು:
ಎಫ್‌ಐಆರ್ (FIR) ದಾಖಲು: ನಿಯಮ ಉಲ್ಲಂಘಿಸಿದರೆ ಪೋಷಕರ ಮೇಲೆ ನೇರವಾಗಿ ಪ್ರಕರಣ ದಾಖಲಾಗುತ್ತದೆ.
ಭಾರೀ ದಂಡ: ಕಾನೂನು ಪ್ರಕಾರ ನ್ಯಾಯಾಲಯದಲ್ಲಿ 25,000 ರೂಪಾಯಿಗೂ ಹೆಚ್ಚು ದಂಡ ವಿಧಿಸಲಾಗುವುದು.
ನಗರದ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಎಲ್ಲಾ ಸಾರ್ವಜನಿಕರಲ್ಲಿ ಮನವಿ ಏನೆಂದರೆ, ಕಾನೂನು ಉಲ್ಲಂಘನೆಗೆ ಆಸ್ಪದ ನೀಡಬೇಡಿ. ತಮ್ಮ ಮಕ್ಕಳ ಪ್ರಾಣದ ಜೊತೆಗೆ ಇತರರ ಸುರಕ್ಷತೆಯೂ ಮುಖ್ಯವಾಗಿದೆ. ದಯವಿಟ್ಟು ಜವಾಬ್ದಾರಿಯುತ ಪಾಲಕರಾಗಿ ವರ್ತಿಸಿ, ಅಪ್ರಾಪ್ತ ವಯಸ್ಸಿನ ಮಕ್ಕಳು ರಸ್ತೆಗೆ ಇಳಿಯದಂತೆ ನೋಡಿಕೊಳ್ಳಿ. ಸಂಚಾರ ನಿಯಮಗಳನ್ನು ಪಾಲಿಸಿ, ದುಬಾರಿ ದಂಡ ಮತ್ತು ಕಾನೂನು ತೊಡಕುಗಳಿಂದ ಪಾರಾಗಿ. ಸುರಕ್ಷಿತವಾಗಿರಿ, ಸುಗಮ ಸಂಚಾರಕ್ಕೆ ಸಹಕರಿಸಿ, ಎಂದು ರಾಯಚೂರು ಎಸ್ಪಿ ಅರುಣಾಂಗ್ಷು ಗಿರಿ ಅವರು ಸೂಚಿಸಿದ್ದಾರೆ.