ಸಂತೆ ಪ್ರದೇಶದಲ್ಲಿ ಹರಿಯುವ ಚರಂಡಿ ನೀರು – ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆ
ಯಾದಗಿರಿ ಜಿಲ್ಲೆ, ಶಹಾಪೂರ: ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನ ಮೂಡಬೂಳ ಗ್ರಾಮ ಪಂಚಾಯತಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದೆ ಕರ್ತವ್ಯ ಲೋಪ ಎಸಗುತ್ತಿದೆ ಎಂಬ ಗಂಭೀರ ಆರೋಪ ಸ್ಥಳೀಯ ಸಂಘಟನೆಯ ಮುಖಂಡರಿಂದ ಕೇಳಿಬಂದಿದೆ.
ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯತಿಯಾಗಿರುವ ಮೂಡಬೂಳ ಗ್ರಾಮದಲ್ಲಿ ಪ್ರತಿ ಸೋಮವಾರ ವಾರದ ಸಂತೆ ನಡೆಯುತ್ತಿದ್ದು, ಸಂತೆ ನಡೆಯುವ ಪ್ರದೇಶದಲ್ಲಿ ಚರಂಡಿ ನೀರು ಹರಿಯುತ್ತಿರುವುದರಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಈ ಸಮಸ್ಯೆಯನ್ನು ತಕ್ಷಣ ಸರಿಪಡಿಸುವಂತೆ ಗ್ರಾಮದ ಮುಖಂಡ ಹಾಗೂ ರಾಷ್ಟ್ರೀಯ ಹಿಂದ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶೈಲ್ ಮೂಡಬೂಳ ಅವರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರು.
ಆದರೆ ಈ ಕುರಿತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ತೋರಿದ್ದು, ಸಮಸ್ಯೆ ಪರಿಹಾರಕ್ಕೆ ಯಾವುದೇ ಹಿತಾಸಕ್ತಿ ವಹಿಸಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಗ್ರಾಮದಲ್ಲಿ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂತಹ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಜನತೆಗೆ ನಿರಂತರ ತೊಂದರೆ ಉಂಟಾಗುತ್ತಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಮೂಲ ಉದ್ದೇಶಗಳೇ ವಿಫಲವಾಗುತ್ತಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಈ ವಿಚಾರಕ್ಕೆ ಗಮನಹರಿಸಿ ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಂತೆ ನಡೆಯುವ ಪ್ರದೇಶದ ಕೊಳಚೆ ಮತ್ತು ಚರಂಡಿ ಸಮಸ್ಯೆಯನ್ನು ತಕ್ಷಣ ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇನ್ನೂ ಈ ಕುರಿತು ಸಲ್ಲಿಸಿರುವ ವರದಿ ಹಾಗೂ ಮನವಿಗೆ ತಕ್ಷಣ ಸ್ಪಂದಿಸದಿದ್ದಲ್ಲಿ, ಕರ್ತವ್ಯಲೋಪ ಆರೋಪದಡಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಶ್ರೀಶೈಲ್ ಮೂಡಬೂಳ ಅವರು ಜನ ಆಕ್ರೋಶ ಪತ್ರಿಕೆಗೆ ತಿಳಿಸಿದ್ದಾರೆ.