ವೈರಲ್ ವಿಡಿಯೋಗೆ ಸಾರ್ವಜನಿಕ ಆಕ್ರೋಶ
ಕೊಪ್ಪಳ ಜಿಲ್ಲೆ, ಗಂಗಾವತಿ: ಬಡ ಹಾಗೂ ಚಮ್ಮಾರ ವೃತ್ತಿಗೆ ಸಂಬಂಧಿಸಿದ ದಲಿತ ಸಮುದಾಯದ ಅಪ್ರಾಪ್ತ ಬಾಲಕನ ಮೇಲೆ ಪೋಲಿಸರು ಅಮಾನುಷವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ಗಂಗಾವತಿ ನಗರದ ಬಸ್ ನಿಲ್ದಾಣದಲ್ಲಿ ನಡೆದಿರುವುದಾಗಿ ತಿಳಿದುಬಂದಿದ್ದು, ಮೂಲತಃ ಸಿಂಧನೂರು ತಾಲ್ಲೂಕಿನವನಾದ ಅಪ್ರಾಪ್ತ ಬಾಲಕನ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿದೆ. ಆದರೆ ಆರೋಪದ ನೆಪದಲ್ಲಿ ಬಾಲಕನ ಮೇಲೆ ಪ್ರಾಣಿಗಳ ಮೇಲೆ ನಡೆಸುವ ಕ್ರೂರ ಹಲ್ಲೆಯಂತೆ ವರ್ತಿಸಲಾಗಿದೆ. ಬಾಲಕನ ತಲೆಯ ಮೇಲೆ ಪೋಲಿಸರು ಬೂಟುಗಾಲು ಇಟ್ಟಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಮಾನವೀಯತೆ ಕಳೆದುಕೊಂಡ ಕೃತ್ಯ ಎಂದು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ.
ಈ ಘಟನೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತ ನಿರುಪಾದಿ ಕೆ. ಗೊಮರ್ಸಿ ಅವರ ಗಮನಕ್ಕೆ ಬಂದ ತಕ್ಷಣ ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅಪ್ರಾಪ್ತ ಬಾಲಕನ ಮೇಲೆ ಈ ರೀತಿಯ ದೌರ್ಜನ್ಯ ಮಾನವ ಹಕ್ಕುಗಳ ದಾರುಣ ಉಲ್ಲಂಘನೆಯಾಗಿದ್ದು, ಇದು ಸಂಪೂರ್ಣ ಪೊಲೀಸ್ ಇಲಾಖೆಗೆ ಕಳಂಕ ತರುವಂತಹ ಕೃತ್ಯ ಎಂದು ಅವರು ಆರೋಪಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಿನ್ನೆ ರಾತ್ರಿ ಈ ಘಟನೆ ನಡೆದಿರುವ ಸಾಧ್ಯತೆ ಇದ್ದು, ವಿಡಿಯೋ ವೈರಲ್ ಆದ ಬಳಿಕ ಕರ್ನಾಟಕ ಸರ್ಕಾರದ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆ ಪದೆಪದೆ ನಕಾರಾತ್ಮಕ ಕಾರಣಗಳಿಂದ ಸುದ್ದಿಯಾಗುತ್ತಿರುವುದು ಜನರ ಅಸಮಾಧಾನ ಹಾಗೂ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.