ಶಿಕ್ಷಕರ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ದೇವದುರ್ಗ: ತಾಲ್ಲೂಕಿನ ಕೋಣಚಪ್ಪಳಿ ಗ್ರಾಮದಲ್ಲಿ ದೇಶದ ಮಹತ್ವದ ರಾಷ್ಟ್ರೀಯ ಹಬ್ಬವಾದ ಜನವರಿ 26ರ ಗಣರಾಜ್ಯೋತ್ಸವವನ್ನು ನಿಯಮಾವಳಿಗಳ ಪ್ರಕಾರ ಆಚರಿಸದೆ, ಶಿಕ್ಷಕರಿಲ್ಲದೆ ಹಾಗೂ ಸಾರ್ವಜನಿಕರಿಗೆ ಆಹ್ವಾನಿಸದೇ ಅಲಕ್ಷ್ಯವಾಗಿ ಆಚರಿಸಲಾಗಿದೆ ಎನ್ನುವ ಗಂಭೀರ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ. ಈ ಘಟನೆಯು ಗ್ರಾಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಗಣರಾಜ್ಯೋತ್ಸವದಂತಹ ರಾಷ್ಟ್ರದ ಗೌರವದ ದಿನವನ್ನು ಶಾಲೆಯ ಶಿಕ್ಷಕರೇ ನಿರ್ಲಕ್ಷಿಸಿದರೆ ಮುಂದಿನ ಪೀಳಿಗೆಗೆ ಯಾವ ರೀತಿಯ ಸಂದೇಶ ಹೋಗಲಿದೆ ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಮುಂದಿಟ್ಟಿದ್ದಾರೆ. ಮಕ್ಕಳಲ್ಲಿ ರಾಷ್ಟ್ರಭಕ್ತಿ, ಸಂವಿಧಾನದ ಮಹತ್ವ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸಬೇಕಾದ ಶಿಕ್ಷಕರೇ ಈ ರೀತಿಯ ನಿರ್ಲಕ್ಷ್ಯ ತೋರಿರುವುದು ವಿಷಾದಕರ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾರ್ವಜನಿಕರು ಶಿಕ್ಷಕರನ್ನು ಪ್ರಶ್ನಿಸಿದಾಗ, “ಈ ನದಿ ತೀರದ ಶಾಲೆಗಳಿಗೆ ಶಿಕ್ಷಕರೇ ಇಲ್ಲ. ನಾವೇನು ಮಾಡೋಣ?” ಎಂಬ ಉತ್ತರ ಲಭಿಸಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಉತ್ತರ ಮತ್ತಷ್ಟು ಜನಾಕ್ರೋಶಕ್ಕೆ ಕಾರಣವಾಗಿದ್ದು, ಶಿಕ್ಷಣ ಇಲಾಖೆಯ ಮೇಲಿನ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ ಎನ್ನಲಾಗಿದೆ.
ಇದೇ ವೇಳೆ, ಸಂಘಟನೆಯೊಂದರ ಮುಖಂಡರು ಪತ್ರಿಕೆಗೆ ಪ್ರತಿಕ್ರಿಯೆ ನೀಡುತ್ತಾ, “ಶಾಸಕರು ಸದನದಲ್ಲಿ ಭಾಷಣ ಮಾಡುವುದನ್ನು ಬಿಟ್ಟರೆ ತಾಲ್ಲೂಕಿನ ಶಿಕ್ಷಣ ಅಭಿವೃದ್ಧಿಗೆ ಯಾವುದೇ ರೀತಿಯ ಗಮನ ನೀಡುತ್ತಿಲ್ಲ. ಪರಿಣಾಮವಾಗಿ ದೇವದುರ್ಗ ತಾಲ್ಲೂಕು ಶೈಕ್ಷಣಿಕವಾಗಿ ಸಂಪೂರ್ಣ ನಾಶದ ಹಾದಿಯಲ್ಲಿದೆ” ಎಂದು ಆರೋಪಿಸಿದರು.
ಕೋಣಚಪ್ಪಳಿ ಗ್ರಾಮದಲ್ಲಿನ ಶಾಲೆಯಲ್ಲಿ ಸರ್ಕಾರದ ನಿಯಮಾವಳಿಗಳ ಪ್ರಕಾರ ಗಣರಾಜ್ಯೋತ್ಸವ ಆಚರಿಸದಿರುವುದು ಗಂಭೀರ ಲೋಪವಾಗಿದ್ದು, ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರ ಮೇಲೆ ತಕ್ಷಣವೇ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಲ್ಲದೆ, ತಾಲ್ಲೂಕಿನ ನದಿ ತೀರದ ಶಾಲೆಗಳಿಗೆ ಶಾಶ್ವತ ಶಿಕ್ಷಕರ ನೇಮಕ ಮಾಡಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.