LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಒಂದೇ ಚುನಾವಣೆಯಿಂದ ಕಡಿಮೆ ಖರ್ಚು, ಅಭಿವೃದ್ಧಿಗೆ ಹೆಚ್ಚು ಹಣ'- ಅಣ್ಣಾಮಲೈ

ಬೆಂಗಳೂರು: ಒಂದು ದೇಶ ಒಂದೇ ಚುನಾವಣೆಯಿಂದ ಪ್ರಾದೇಶಿಕ ಪಕ್ಷವು ರಾಷ್ಟ್ರಹಿತದೊಂದಿಗೆ ಹಾಗೂ ರಾಷ್ಟ್ರೀಯ ಪಕ್ಷವು ಪ್ರಾದೇಶಿಕ ಹಿತೈಷಿಯಾಗಿ ಚಿಂತಿಸುವಂತೆ ಆಗಲಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ವಿಶ್ಲೇಷಿಸಿದರು.

ಜಯನಗರದ ಜೈನ್ ವಿಶ್ವವಿದ್ಯಾಲಯದಲ್ಲಿ ನಡೆದ ‘ಒಂದು ದೇಶ ಒಂದು ಚುನಾವಣೆ’ ಕುರಿತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಪಡಿಸುವ ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತಾಗಬೇಕು ಎಂದು ಅವರು ಆಶಿಸಿದರು.

ಯುವಜನರು ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಮತದಾನದಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳಬೇಕಿದೆ ಎಂದು ಅವರು, ಎಲ್ಲರೂ ಸಮಾನರು, ಪುರುಷ- ಮಹಿಳೆ ಸೇರಿ ಎಲ್ಲರಿಗೂ ಒಂದು ಮತದಾನದ ಹಕ್ಕಿದೆ ಎಂಬುದನ್ನು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲೇ ಜಾರಿಗೊಳಿಸಿದ ದೇಶ ನಮ್ಮದು ಎಂದು ವಿವರಿಸಿದರು.
1951-52ರಲ್ಲಿ ಮೊದಲ ಚುನಾವಣೆ ನಡೆದಿತ್ತು. 7 ಹಂತಗಳಲ್ಲಿ ಅದು ನಡೆಯಿತು. 57ರಲ್ಲಿ 2ನೇ ಚುನಾವಣೆ ನಡೆಸಲಾಯಿತು.

1952, 57, 62, 67ರಲ್ಲಿ ರಾಜ್ಯ ವಿಧಾನಸಭೆಗಳು- ಸಂಸತ್ತಿಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು ಎಂದು ನೆನಪಿಸಿದರು.

1970ರಲ್ಲಿ ಲೋಕಸಭೆಯನ್ನು ಒಂದು ವರ್ಷ ಮೊದಲೇ ವಿಸರ್ಜಿಸಲಾಯಿತು. ಕಮ್ಯುನಿಸ್ಟ್ ಪಕ್ಷದ ಆಡಳಿತ ಇದ್ದ ಕೇರಳ ರಾಜ್ಯದ ಆಡಳಿತದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಸಂವಿಧಾನಕ್ಕೆ ವಿರುದ್ಧವಾಗಿ ಆ ರಾಜ್ಯ ಸರಕಾರವನ್ನು ವಜಾ ಮಾಡಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸೇತರ ರಾಜ್ಯಗಳ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರು. ಹಿಂದೆ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಜನತಾ ಪಕ್ಷವೂ ಇದೇ ರೀತಿ ಮಾಡಿತ್ತು ಎಂದರು.

28 ರಾಜ್ಯಗಳು ಇರುವ ಭಾರತದಲ್ಲಿ ಚುನಾವಣೆ ಎಂಬುದು ಈಗ ನಿರಂತರ ಪ್ರಕ್ರಿಯೆ ಆಗಿದೆ. 45 ದಿನಗಳ ನೀತಿಸಂಹಿತೆ ಪ್ರಕ್ರಿಯೆ ಅಭಿವೃದ್ಧಿ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. 6 ತಿಂಗಳ ಕಾಲ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ ನಡೆಯುತ್ತದೆ. ಒಂದು ಚುನಾವಣೆ ಸಂಬಂಧ ಒಂದು ರಾಜ್ಯ ಕನಿಷ್ಠ ಏಳೂವರೆ ತಿಂಗಳನ್ನು ಕಳಕೊಳ್ಳುತ್ತದೆ ಎಂದು ವಿವರಿಸಿದರು.

ಶಿಕ್ಷಕರು, ಸಿಆರ್‍ಪಿಎಫ್ ಸೇರಿ ಆಡಳಿತಯಂತ್ರವು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಒಂದೇ ಮತದಾರರ ಪಟ್ಟಿ ಇದ್ದು, ಸಂಸದ, ಶಾಸಕರ ಆಯ್ಕೆಗೆ ತಲಾ ಒಂದೊಂದು ಬಟನ್ ಒತ್ತುವ ಪ್ರಕ್ರಿಯೆಯೇ ಒಂದು ದೇಶ ಒಂದು ಮತದಾನದ ಹಿಂದಿದೆ ಎಂದು ತಿಳಿಸಿದರು. ನೀತಿ ಆಯೋಗ, ಕಾನೂನು ಆಯೋಗವೂ ಒಂದೇ ಚುನಾವಣೆಯ ಪರವಾಗಿದೆ; ಇದಕ್ಕೆ ಈಗ ಸಕಾಲ ಎಂದೇ ತಿಳಿಸಿದೆ ಎಂದು ಹೇಳಿದರು.

2019ರಲ್ಲಿ 16 ಪಕ್ಷಗಳು ಒಂದೇ ಚುನಾವಣೆಯನ್ನು ಬೆಂಬಲಿಸಿದ್ದವು. ಸಿಪಿಎಂ ಸೇರಿ 3 ಪಕ್ಷಗಳು ಇದನ್ನು ವಿರೋಧಿಸಿದ್ದವು. 1932ರಿಂದಲೇ ಒಂದು ದೇಶ ಒಂದು ಚುನಾವಣೆಯ ವಿಚಾರ ಚರ್ಚೆಗೆ ಒಳಪಟ್ಟಿದೆ ಎಂದು ತಿಳಿಸಿದರು. ಈ ಪದ್ಧತಿಯಿಂದ ಮತದಾರರು ಉದಾಸೀನ ಪ್ರವೃತ್ತಿಯಿಂದ ಮತದಾನ ಮಾಡದೆ ಉಳಿಯುವುದನ್ನು ತಪ್ಪಿಸಲು ಸಾಧ್ಯ ಎಂದು ಆಶಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST