ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರು ಮೇ 13, 2026ರ (ಇಂದು) ಬುಧವಾರದಂದು ಹೃದಯಾಘಾತದಿಂದ ನಿಧನರಾಗಿದ್ದು, ರಾಮನಗರದ ಅವರ ಫಾರ್ಮ್‌ಹೌಸ್‌ನಲ್ಲಿ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ ಇಂದು ನೆರವೇರಿದೆ.
ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ಯಶಸ್ವಿ ನಿರ್ಮಾಪಕ ದಿಲೀಪ್ ರಾಜ್ (47) ಅವರ ಪಾರ್ಥಿವ ಶರೀರವು ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿವಿಧಾನಗಳೊಂದಿಗೆ ಮಣ್ಣಿನಲ್ಲಿ ಲೀನವಾಯಿತು. ಬುಧವಾರ ನಸುಕಿನ ಜಾವ ಸಂಭವಿಸಿದ ದಿಢೀರ್ ಹೃದಯಾಘಾತದಿಂದ ನಿಧನರಾದ ನಟನ ಅಂತ್ಯಸಂಸ್ಕಾರವನ್ನು ರಾಮನಗರದ ಅವರ ಫಾರ್ಮ್‌ಹೌಸ್‌ನಲ್ಲಿ ನೆರವೇರಿಸಲಾಯಿತು. ಕಿರುತೆರೆ ಮತ್ತು ಬೆಳ್ಳಿಪರದೆ ಎರಡರಲ್ಲೂ ಸಕ್ರಿಯರಾಗಿದ್ದ ಪ್ರತಿಭಾವಂತ ಕಲಾವಿದನ ಅಕಾಲಿಕ ನಿರ್ಗಮನಕ್ಕೆ ಇಡೀ ಚಂದನವನ ಕಂಬನಿ ಮಿಡಿದಿದೆ.
ಬುಧವಾರ ನಸುಕಿನ ಜಾವ ದಿಲೀಪ್ ರಾಜ್ ಅವರಿಗೆ ಮನೆಯಲ್ಲಿದ್ದಾಗ ತೀವ್ರ ಹೃದಯಾಘಾತ ಸಂಭವಿಸಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಕೆಲವು ವರದಿಗಳ ಪ್ರಕಾರ, ಇತ್ತೀಚೆಗೆ ಗೋವಾ ಪ್ರವಾಸದಲ್ಲಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಲಾಗಿದೆ.ರಾಮನಗರದ ಅವರ ಫಾರ್ಮ್‌ಹೌಸ್‌ನಲ್ಲಿ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ ನಡೆದಿದೆ.. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ.ದಿಲೀಪ್ ಅವರ ಸಹೋದರ ದೀಪಕ್ ರಾಜ್ ವಿಧಿ ವಿಧಾನ ಪೂರೈಸಿದರು. ನಟನನ್ನು ನೆನೆದು ಇಡೀ ಕನ್ನಡ ಚಿತ್ರರಂಗ ಕಣ್ಣೀರಿಡುತ್ತಿದೆ.
ದಿಲೀಪ್ ರಾಜ್ ಅವರ ಸಾಧನೆ:
ಚಿತ್ರರಂಗ: ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’, ‘ಯು ಟರ್ನ್’, ‘ಆರ್ಕೆಸ್ಟ್ರಾ ಮೈಸೂರು’, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಕಿರುತೆರೆ: ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ನಟಿಸಿದ್ದರು. ಅಲ್ಲದೆ, ‘ಪಾರು’ ಮತ್ತು ‘ನಾ ನಿನ್ನ ಬಿಡಲಾರೆ’ ಮುಂತಾದ ಧಾರಾವಾಹಿಗಳನ್ನು ತಮ್ಮದೇ ಬ್ಯಾನರ್ (DR Creations) ಅಡಿಯಲ್ಲಿ ನಿರ್ಮಾಣ ಮಾಡಿದ್ದರು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ದಿಲೀಪ್ ರಾಜ್, ನಟನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ವಲಯದಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.