ಮಡಿಕೇರಿ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 2026 ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ-2 ನ್ನು ಮೇ, 18 ರಿಂದ 25 ರವರೆಗೆ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಮತ್ತು ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಈ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅವ್ಯವಹಾರಗಳಿಲ್ಲದೆ ಸುಗಮವಾಗಿ ನಡೆಸುವ ಸಲುವಾಗಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ರ ಕಲಂ 163 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿಭರ್ಂದಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶಿಸಿದ್ದಾರೆ. ಈ ವ್ಯಾಪ್ತಿಯಲ್ಲಿರುವ ಎಲ್ಲಾ ಜೆರಾಕ್ಸ್ ಅಂಗಡಿ ಮತ್ತು ಸೈಬರ್ ಸೆಂಟರ್‍ಗಳನ್ನು ಮುಚ್ಚಿಸತಕ್ಕದೆಂದು ಸಹ ತಿಳಿಸಿದೆ.
ಈ ಆದೇಶವು ಪರೀಕ್ಷಾ ದಿನಗಳಂದು ಬೆಳಗ್ಗೆ 09 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ
ಮೇ ಮತ್ತು ಜೂನ್ ಮಾಹೆ ಪಡಿತರ ಆಹಾರಧಾನ್ಯ ಮೇ ಮಾಹೆಯಲ್ಲಿಯೇ ವಿತರಣೆ
ಮಡಿಕೇರಿ : ಕೇಂದ್ರ ಸರ್ಕಾರವು ದೇಶದಲ್ಲಿ ಮುಂಬರುವ ಖರೀದಿ ಋತುವಿನ ಹಿನ್ನಲೆಯಲ್ಲಿ ಮತ್ತು ಪರಿಣಾಮಕಾರಿ ಲಾಜಿಸ್ಟಿಕ್ಸ್ ಮತ್ತು ಸಂಗ್ರಹಣೆಗಾಗಿ ರಾಜ್ಯಗಳು ಎದುರಿಸುತ್ತಿರುವ ಅಡಚಣೆಗಳಿಂದಾಗಿ ಎನ್‍ಎಫ್‍ಎಸ್‍ಎ ಅಡಿಯಲ್ಲಿ ಮೇ ಮತ್ತು ಜೂನ್-2026 ರ ಎರಡು ಮಾಹೆಗಳ ಅಹಾರಧಾನ್ಯ ಹಂಚಿಕೆಯನ್ನು ಮುಂಗಡವಾಗಿ ಎತ್ತುವಳಿ ಮಾಡಿ ಕೂಡಲೇ ವಿತರಣೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಪ್ರಯುಕ್ತ ಮೇ-2026 ಮತ್ತು ಜೂನ್-2026 ರ ಎರಡು ಮಾಹೆಗಳ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‍ಎಫ್‍ಎಸ್) ಹಂಚಿಕೆಯನ್ನು ಮೇ-2026 ರ ಮಾಹೆಯಲ್ಲಿ ವಿತರಿಸಲು ಸರ್ಕಾರವು ನಿರ್ದೇಶನ ನೀಡಿರುತ್ತದೆ.
ಪ್ರಯುಕ್ತ ಕೊಡಗು ಜಿಲ್ಲೆಯ ಪ್ರತಿ ಅಂತ್ಯೋದಯ (ಎಎವೈ) ಪಡಿತರ ಚೀಟಿಗೆ 70 ಕೆ.ಜಿ (ಮೇ-35 + ಜೂನ್-35) ಅಕ್ಕಿ ಮತ್ತು ಪಿ.ಹೆಚ್.ಹೆಚ್ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 10 ಕೆ.ಜಿ (ಮೇ-5 + ಜೂನ್-5) ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಮೇ ಮತ್ತು ಜೂನ್ 2026 ರ ಎರಡು ಮಾಹೆಗಳ ಆಹಾರಧಾನ್ಯವನ್ನು ಮೇ-2026ರ ಮಾಹೆಯಲ್ಲಿಯೇ ಒಟ್ಟಿಗೆ ವಿತರಣೆ ಮಾಡಬೇಕಿರುವುದರಿಂದ ವಿತರಣಾ ಸಂದರ್ಭದಲ್ಲಿ ಪ್ರತಿ ಮಾಹೆಯ ವಿತರಣೆಗೆ ಫಲಾನುಭವಿಗಳಿಂದ ಪ್ರತ್ಯೇಕ ಬಯೋ ಮೆಟ್ರಿಕ್ ಪಡೆಯುವ ಅವಕಾಶವನ್ನು ಕಲ್ಪಿಸಿದ್ದು, ಪಡಿತರ ಚೀಟಿ ಫಲಾನುಭವಿಗಳು ಮೇ ಮತ್ತು ಜೂನ್ 2026ರ ಎರಡು ಮಾಹೆಗಳ ಬಯೋ ಮೆಟ್ರಿಕ್ ನೀಡಿ ಆಹಾರಧಾನ್ಯವನ್ನು ಪಡೆಯಲು ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ತಿಳಿಯಪಡಿಸಿದೆ.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದ ವತಿಯಿಂದ ವಿತರಿಸಲಾಗುತ್ತಿರುವ ಹೆಚ್ಚುವರಿ 05 ಕೆ.ಜಿ ಆಹಾರಧಾನ್ಯವನ್ನು ಮೇ ಮತ್ತು ಜೂನ್-2026 ರ ಮಾಹೆಗಳ ಹಂಚಿಕೆಯನ್ನು ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಫಲಾನುಭವಿಗಳಿಗೆ ಈಗಾಗಲೇ ವಿತರಿಸುತ್ತಿರುವ ರೀತಿಯಲ್ಲಿ ಜೂನ್-2026 ರ ಮಾಹೆಯಲ್ಲಿ ಎತ್ತುವಳಿ ಮಾಡಿ ವಿತರಿಸಲು ಸರ್ಕಾರವು ನಿರ್ದೇಶಿಸಿದೆ.
ಈ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುವುದು ಮತ್ತು ಈ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಭೀಮರಾಯ ತಿಳಿಸಿದ್ದಾರೆ