ನವದೆಹಲಿ, ಜ.24:ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಕಾನೂನುಬಾಹಿರ ಹಾಗೂ ಹಿಂಸಾತ್ಮಕ ಆಡಳಿತ ನಡೆಸುತ್ತಿದ್ದಾರೆ. ದೇಶವನ್ನು ಭಯೋತ್ಪಾದನೆ, ಅರಾಜಕತೆ ಮತ್ತು ಪ್ರಜಾಪ್ರಭುತ್ವ ಗಡಿಪಾರು ಯುಗವನ್ನಾಗಿ ಮಾಡಿದ್ದಾರೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ತೀವ್ರ ಆರೋಪ ಮಾಡಿದ್ದಾರೆ.
ಯೂನಸ್ ಆಡಳಿತದಿಂದ ತಾಯ್ನಾಡಿನ ರಕ್ತ ಸೋರುತ್ತಿದೆ. ಆದ್ದರಿಂದ ಮಧ್ಯಂತರ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಅವರು ಬಾಂಗ್ಲಾದ ಜನತೆಗೆ ಕರೆ ನೀಡಿದ್ದಾರೆ. 2024ರಲ್ಲಿ ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ನೆಲೆಸಿರುವ ಶೇಖ್ ಹಸೀನಾ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಾಂಗ್ಲಾದ ಜನರನ್ನು ಉದ್ದೇಶಿಸಿ ಆಡಿಯೋ ಸಂದೇಶದ ಮೂಲಕ ಮಾತನಾಡಿದ ಅವರು, ಯೂನಸ್ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಯೂನಸ್ ಸರ್ವಾಧಿಕಾರಿ, ಕೊಲೆಗಾರ; ಅಧಿಕಾರದ ದುರಾಸೆಯಿಂದ ದೇಶವನ್ನು ಆಳುತ್ತಿದ್ದಾರೆ. ನನ್ನ ಪದಚ್ಯುತಿಯ ನಂತರ ಇಡೀ ರಾಷ್ಟ್ರ ಅರಾಜಕತೆ ಮತ್ತು ಹಿಂಸೆಗೆ ತಳ್ಳಲ್ಪಟ್ಟಿದೆ. ವಿದೇಶಿ ಶಕ್ತಿಗಳ ಕೈಗೊಂಬೆಯಾಗಿ ಅವರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಾಂಗ್ಲಾದೇಶದ ನಾಗರಿಕರು ಇದಕ್ಕೆ ಅವಕಾಶ ಕೊಡಬಾರದು. ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು ಯಾವುದೇ ಬೆಲೆ ತೆತ್ತಾದರೂ ಯೂನಸ್ ಸರ್ಕಾರವನ್ನು ಉರುಳಿಸಬೇಕು. ಈ ಹೋರಾಟಕ್ಕಾಗಿ ಎಲ್ಲರೂ ಒಟ್ಟಾಗಬೇಕು ಎಂದು ಶೇಖ್ ಹಸೀನಾ ಕರೆ ನೀಡಿದರು.
ಬಾಂಗ್ಲಾದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಹಿಂದೂಗಳು, ಕ್ರೈಸ್ತರು ಮತ್ತು ಬೌದ್ಧರನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ. ಇಂತಹ ಅಕ್ರಮ ಸರ್ಕಾರ ಅಧಿಕಾರದಲ್ಲಿರುವವರೆಗೆ ಮುಕ್ತ ಹಾಗೂ ನ್ಯಾಯಯುತ ಚುನಾವಣೆ ಸಾಧ್ಯವಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮುಂಬರುವ ಫೆಬ್ರವರಿ 12ರಂದು ಬಾಂಗ್ಲಾದೇಶದಲ್ಲಿ ರಾಷ್ಟ್ರೀಯ ಚುನಾವಣೆಯನ್ನು ನಿಗದಿಪಡಿಸಲಾಗಿದ್ದು, ಅವಾಮಿ ಲೀಗ್ ಪಕ್ಷಕ್ಕೆ ಸ್ಪರ್ಧಿಸಲು ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ.