ಟೆಹ್ರಾನ್/ದುಬೈ: ವಿಶ್ವದ ಪ್ರಮುಖ ತೈಲ ಪೂರೈಕೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಮರದ ಬೋಟ್ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮುಳುಗಿದ ಪರಿಣಾಮ, ಭಾರತೀಯ ನಾವಿಕನೊಬ್ಬ ದುರ್ಮರಣಕ್ಕೀಡಾಗಿದ್ದಾರೆ. ಬೋಟ್‌ನಲ್ಲಿದ್ದ ಒಟ್ಟು 18 ಭಾರತೀಯ ಸಿಬ್ಬಂದಿಗಳ ಪೈಕಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಉಳಿದವರನ್ನು ಅದೃಷ್ಟವಶಾತ್ ರಕ್ಷಿಸಲಾಗಿದೆ.
ಬೋಟ್ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ ಸಮೀಪದಲ್ಲೇ ಹಾದು ಹೋಗುತ್ತಿದ್ದ ಮತ್ತೊಂದು ಹಡಗು ತಕ್ಷಣವೇ ಸ್ಪಂದಿಸಿ ನಾವಿಕರನ್ನು ರಕ್ಷಿಸಿದೆ. ಸದ್ಯ ಗಾಯಾಳುಗಳನ್ನು ದುಬೈ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂತ್ರಸ್ತ ನಾವಿಕರನ್ನು ಭೇಟಿ ಮಾಡಿದ್ದು, ಸಂಕಷ್ಟದಲ್ಲಿರುವ ಭಾರತೀಯರಿಗೆ ಮತ್ತು ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಹಾಗೂ ವೈದ್ಯಕೀಯ ನೆರವು ನೀಡುವುದಾಗಿ ಭರವಸೆ ನೀಡಿದೆ.
ಹೆಚ್ಚುತ್ತಿರುವ ಉದ್ವಿಗ್ನತೆ: ಆತಂಕದಲ್ಲಿ ನಾವಿಕರು
ಈ ಘಟನೆಯು ಕೇವಲ ಅಪಘಾತವೋ ಅಥವಾ ಪ್ರಾದೇಶಿಕ ಸಂಘರ್ಷದ ಭಾಗವೋ ಎಂಬ ಸಂಶಯಗಳು ಮೂಡಿವೆ. ಕಳೆದ ಕೆಲವು ದಿನಗಳಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಮತ್ತು ಅಮೆರಿಕ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇರಾನ್ ಮೇಲೆ ಅಮೆರಿಕ ಪಡೆಗಳು ಆಕ್ರಮಣ ಮಾಡುತ್ತಿವೆ ಎಂಬ ಆರೋಪಗಳ ನಡುವೆಯೇ ಈ ದುರಂತ ಸಂಭವಿಸಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.