Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಡಾ. ರವಿ ಪಾಟೀಲ ಸೇರಿ 20-25 ಜನರ ವಿರುದ್ಧ ಎಫ್‌ಐಆರ್

ಬೆಳಗಾವಿ, ಅ. 2 : (ಸಮದರ್ಶಿ ಸುದ್ದಿ) - ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವೇಳೆ ಫಾರಂ-7 ಅರ್ಜಿಗಳನ್ನು ಬಳಸಿ 198 ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಡಾ. ರವಿ ಪಾಟೀಲ ಸೇರಿದಂತೆ ಹಲವರ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಾರ್ಡ್ ನಂ.12ರ ಬೂತ್ ಮಟ್ಟದ ಏಜೆಂಟ್ (ಬಿಎಲ್‌ಎ) ಮೀರಾಸಾಬ ಸನದಿ ನೀಡಿದ ದೂರಿನ ಆಧಾರದ ಮೇಲೆ ಸೆ.30ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗೆ ಸಹಾಯ ಮಾಡುತ್ತಾ ಮತದಾರರ ವಿವರಗಳ ಪರಿಶೀಲನೆಯಲ್ಲಿ ತೊಡಗಿದ್ದಾಗ ಈ ಪ್ರಕರಣ ತಮ್ಮ ಗಮನಕ್ಕೆ ಬಂದಿದೆ ಎಂದು ಸನದಿ ದೂರಿನಲ್ಲಿ ತಿಳಿಸಿದ್ದಾರೆ.

ಸೆ.22ರಂದು ನಡೆದಿದ್ದೇನು?

ಎಫ್‌ಐಆರ್ ಪ್ರಕಾರ, ಸೆ.22ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಡಾ. ರವಿ ಪಾಟೀಲ, ಶಂಕರ ಬೀರಪ್ಪ ನಾಯಕ, ಪ್ರಶಾಂತ ದೀಪಕ ಮುಂದಿನಮನಿ ಸೇರಿದಂತೆ 20ರಿಂದ 25 ಮಂದಿ ಒಟ್ಟಾಗಿ ಸೇರಿ ಮುಸ್ಲಿಂ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಸಂಚು ರೂಪಿಸಿದ್ದರು ಎಂದು ದೂರುದಾರ ಆರೋಪಿಸಿದ್ದಾರೆ.

ವೀರಭದ್ರನಗರ ವ್ಯಾಪ್ತಿಯ 198 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವು ಚುನಾವಣಾ ನೋಂದಣಾಧಿಕಾರಿ (ಇಆರ್‌ಒ) ನೀಡಿರುವ ನೈಜ ದಾಖಲೆಗಳೆಂದು ಬಿಂಬಿಸಿ ಬಿಎಲ್‌ಒಗೆ ಸಲ್ಲಿಸಲಾಗಿದೆ ಎಂಬ ಆರೋಪ ಎಫ್‌ಐಆರ್‌ನಲ್ಲಿದೆ.

ಈ ದಾಖಲೆಗಳೊಂದಿಗೆ ತಂದಿದ್ದ ಫಾರಂ-7 ಅರ್ಜಿಗಳಲ್ಲಿ ದೂರುದಾರ ಮೀರಾಸಾಬ ಸನದಿ ಹಾಗೂ ಅವರ ಕುಟುಂಬ ಸದಸ್ಯರ ಹೆಸರುಗಳೂ ಸೇರಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇಆರ್‌ಒ ಹೆಸರಿನಲ್ಲಿ ನಕಲಿ ಕರೆ ಆರೋಪ

ಪ್ರಕರಣದಲ್ಲಿ ಮತ್ತೊಂದು ಗಂಭೀರ ಆರೋಪವನ್ನೂ ಮಾಡಲಾಗಿದೆ. ಆರೋಪಿಗಳು ಬಿಎಲ್‌ಒ ಮೇಲೆ ಒತ್ತಡ ಹೇರಿದ್ದಲ್ಲದೆ, ಮತ್ತೊಬ್ಬ ವ್ಯಕ್ತಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆತನೇ ಚುನಾವಣಾ ನೋಂದಣಾಧಿಕಾರಿ ಎಂದು ಹೇಳಿಸಿ ಮಾತನಾಡಿಸಿದ್ದಾರೆ ಎನ್ನಲಾಗಿದೆ.

ಆ ವ್ಯಕ್ತಿ ಇಆರ್‌ಒ ಎಂದು ನಂಬಿಸಿ ಬಿಎಲ್‌ಒ ಅವರ ಸಹಿಯನ್ನು ಪಡೆದುಕೊಳ್ಳಲಾಗಿದೆ. ಈ ಮೂಲಕ ದೂರುದಾರ ಹಾಗೂ ಸಂಬಂಧಪಟ್ಟ ಮತದಾರರಿಗೆ ವಂಚಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಫಾರಂ-7 ಎಂದರೇನು?

ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಹೆಸರಿನ ಸೇರ್ಪಡೆಗೆ ಆಕ್ಷೇಪ ಸಲ್ಲಿಸಲು ಅಥವಾ ಈಗಾಗಲೇ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರನ್ನು ತೆಗೆದುಹಾಕುವಂತೆ ಕೋರಿ ಆಕ್ಷೇಪ ಸಲ್ಲಿಸಲು ಫಾರಂ-7 ಬಳಸಲಾಗುತ್ತದೆ.

ಆದರೆ ಫಾರಂ-7 ಸಲ್ಲಿಸಿದ ಮಾತ್ರಕ್ಕೆ ಮತದಾರರ ಹೆಸರು ಸ್ವಯಂಚಾಲಿತವಾಗಿ ಪಟ್ಟಿಯಿಂದ ಅಳಿಸುವುದಿಲ್ಲ. ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಆಕ್ಷೇಪವನ್ನು ಪರಿಶೀಲಿಸಿ, ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ.

ಹೀಗಾಗಿ ಬೆಳಗಾವಿಯ ಈ ಪ್ರಕರಣದಲ್ಲಿ 198 ಮತದಾರರ ಹೆಸರುಗಳು ಈಗಾಗಲೇ ಮತದಾರರ ಪಟ್ಟಿಯಿಂದ ಅಳಿಸಲ್ಪಟ್ಟಿವೆ ಎಂಬುದಲ್ಲ. ಅವರ ಹೆಸರುಗಳನ್ನು ತೆಗೆದುಹಾಕಲು ಫಾರಂ-7 ಮತ್ತು ನಕಲಿ ದಾಖಲೆಗಳನ್ನು ಬಳಸಲು ಯತ್ನಿಸಲಾಗಿದೆ ಎಂಬುದು ಎಫ್‌ಐಆರ್‌ನಲ್ಲಿರುವ ಆರೋಪವಾಗಿದೆ.

ಗಲಭೆಗೆ ಪ್ರಚೋದಿಸುವ ಪರಿಸ್ಥಿತಿ ಸೃಷ್ಟಿಸುವ ಉದ್ದೇಶದ ಆರೋಪ

198 ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದರೆ, ಅದರಿಂದ ಬಾಧಿತರಾದವರು ಆಕ್ರೋಶಗೊಂಡು ಹಿಂಸಾಚಾರಕ್ಕೆ ಇಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಉದ್ದೇಶ ಆರೋಪಿಗಳಿಗಿತ್ತು ಎಂದು ದೂರುದಾರ ಆರೋಪಿಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಆರೋಪದ ಹಿನ್ನೆಲೆಯಲ್ಲಿ ಗಲಭೆಗೆ ಪ್ರಚೋದನೆ ನೀಡುವ ಉದ್ದೇಶಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ಕಲಂ ಕೂಡ ಪ್ರಕರಣದಲ್ಲಿ ಸೇರಿಸಲಾಗಿದೆ.

ವಂಚನೆ, ನಕಲಿ ದಾಖಲೆ, ಅಪರಾಧ ಸಂಚು ಪ್ರಕರಣ

ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4)ರಡಿ ವಂಚನೆ, 336(3)ರಡಿ ನಕಲಿ ದಾಖಲೆ ಸೃಷ್ಟಿ, 336(4)ರಡಿ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದ ನಕಲಿ ದಾಖಲೆ ಸೃಷ್ಟಿ, 353ರಡಿ ಸಾರ್ವಜನಿಕರಿಗೆ ಹಾನಿಕಾರಕವಾಗಬಹುದಾದ ಹೇಳಿಕೆ, 61(2)ರಡಿ ಅಪರಾಧ ಸಂಚು ಹಾಗೂ 3(5)ರಡಿ ಸಾಮಾನ್ಯ ಉದ್ದೇಶಕ್ಕೆ ಸಂಬಂಧಿಸಿದ ಆರೋಪಗಳನ್ನು ದಾಖಲಿಸಲಾಗಿದೆ.

ಇದಲ್ಲದೆ, ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದಕ್ಕೆ ಸಂಬಂಧಿಸಿದ ಕಲಂ 192 ಹಾಗೂ ಅಕ್ರಮ ಕೂಟದ ಸಾಮಾನ್ಯ ಉದ್ದೇಶದ ಅನುಷ್ಠಾನದಲ್ಲಿ ನಡೆದ ಅಪರಾಧಕ್ಕೆ ಅದರ ಸದಸ್ಯರ ಹೊಣೆಗಾರಿಕೆಗೆ ಸಂಬಂಧಿಸಿದ ಕಲಂ 190ರಡಿಯೂ ಪ್ರಕರಣ ದಾಖಲಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ