https://youtu.be/qVhdmZ8Vd_A?si=nz1xOSiIM3HB8lI5
ತಿಂಥಿಣಿ ಗ್ರಾಮದಲ್ಲಿ ಸರ್ಕಾರಿ ಬಸ್ ಚಾಲಕನ ಅಜಾಗರೂಕತೆ ಹಾಗೂ ಮದ್ಯಪಾನದಿಂದ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದ ಘಟನೆ ನಡೆದಿದೆ. ದೇವದುರ್ಗ ಡಿಪೋಗೆ ಸೇರಿದ ಸರ್ಕಾರಿ ಬಸ್‌ನ್ನು ಚಾಲಕ ಅಂಬರೇಶ ನಿಲ್ಲೋಕು ಬಾರದಷ್ಟು ಮದ್ಯಪಾನ ಮಾಡಿಕೊಂಡು ಚಲಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮದ್ಯದ ಏಟಿನಲ್ಲಿ ನಿಯಂತ್ರಣ ಕಳೆದುಕೊಂಡ ಚಾಲಕ, ತಿಂಥಣಿಯ ಪ್ರಸಿದ್ಧ ಮೌನೇಶ್ವರ ದೇವಸ್ಥಾನದ ಆವರಣಕ್ಕೆ ನೇರವಾಗಿ ಬಸ್ ನುಗ್ಗಿಸಿದ್ದಾನೆ. ಈ ವೇಳೆ ದೇವಸ್ಥಾನದಲ್ಲಿ ಸಾಧು-ಸಂತರು ವಿಶ್ರಾಂತಿ ಪಡೆಯುತ್ತಿದ್ದ ಜಾಗದತ್ತ ಬಸ್ ನುಗ್ಗಿದ್ದು, ಕೆಲವೇ ಕ್ಷಣಗಳಲ್ಲಿ ದೊಡ್ಡ ಅಪಾಯ ಸಂಭವಿಸುವ ಭೀತಿ ಉಂಟಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೆ ಭಾರೀ ಅನಾಹುತ ತಪ್ಪಿದೆ. ಘಟನೆಯ ಬಳಿಕ ಸ್ಥಳೀಯರು ತಕ್ಷಣವೇ ಎಚ್ಚೆತ್ತುಕೊಂಡು ಬಸ್ ಅನ್ನು ಮುಂದಕ್ಕೆ ಸಾಗದಂತೆ ತಡೆದು, ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಮದ್ಯಪಾನ ಮಾಡಿಕೊಂಡು ಸಾರ್ವಜನಿಕ ಸಾರಿಗೆ ವಾಹನ ಚಲಾಯಿಸಿದ್ದೇ ಗಂಭೀರ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಕುಡುಕ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಘಟನೆ ಸಾರಿಗೆ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ಮತ್ತೊಮ್ಮೆ ಪ್ರಶ್ನೆಗೆ ಒಳಪಡಿಸಿದೆ. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡಿದ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.