
ಅದರಂತೆ, ಈ ಹಿಂದೆ ಮುಖ್ಯ ಆಯುಕ್ತರವರ ಅಧ್ಯಕ್ಷತೆಯಲ್ಲಿ ದಿನಾಂಕ: 02-02-2024 ಮತ್ತು 12-02-2024 ರಂದು ನಡೆದ ಸಭೆಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲಾ ವಾಣಿಜ್ಯ ಉದ್ದಿಮೆಗಳ ದಿನಾಂಕ : 28-02-2024 ರೊಳಗೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸುವಂತೆ ಎಲ್ಲಾ ವಾಣಿಜ್ಯದಾರರಿಗೆ ಸೂಚಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ದಿನಾಂಕ: 29-02-2024 ರಿಂದ ಅನ್ವಯವಾಗುವಂತೆ, ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗಳನ್ನು ಇಲಾಖಾ ವತಿಯಿಂದ ನೀಡಿರುವ ಉದ್ದಿಮೆ ಪರವಾನಿಗೆಗಳನ್ನು ಅಮಾನತ್ತುಗೊಳಿಸಲು ಹಾಗೂ ಅಂತಹ ವಾಣಿಜ್ಯ ಉದ್ದಿಮೆಗಳನ್ನು ಬೀಗಮುದ್ರೆ (Sealdown) ಮಾಡಲು ಆರೋಗ್ಯ ಇಲಾಖಾವತಿಯಿಂದ ಅಗತ್ಯಕ್ರಮ ಕೈಗೊಳ್ಳಲು ದಿನಾಂಕ: 28-02-2024ರಂದು ಸುತ್ತೋಲೆ ಹೊರಡಿಸಲಾಗಿತ್ತು.
ಮುಂದುವರೆದು, ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದ ಕಡೆ ಶೇ.60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯವಕಾಶ ಬೇಕೆಂಬುದನ್ನು ಪರಿಗಣಿಸಿ, ಸನ್ಮಾನ್ಯ ಉಪ ಮುಖ್ಯಮಂತ್ರಿಗಳು, ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರ ನಿರ್ದೇಶನದ ಮೇರೆಗೆ ಈಗಾಗಲೇ ನೀಡಲಾಗಿದ್ದ ದಿನಾಂಕ: 29-02-2024ರವರೆಗಿನ ಗಡುವನ್ನು ಸಡಿಲಗೊಳಿಸಿ, ದಿನಾಂಕ: 13-03-2024 ರವರೆಗೆ 2 ವಾರಗಳ ಕಾಲ ವಿಸ್ತರಿಸಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ರವರು ಪತ್ರಿಕಾ ಸ್ಪಷ್ಠೀಕರಣದ ಮೂಲಕ ತಿಳಿಸಿರುತ್ತಾರೆ.