ಬೆಂಗಳೂರು, ಜ.26: ಸಿಗರೇಟ್ ಹಚ್ಚಲು ಲೈಟರ್ ಕೇಳಿದ ವಿಚಾರದಲ್ಲಿ ಇಬ್ಬರು ಸ್ನೇಹಿತರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೆ.ಆರ್ಪುರ ನಿವಾಸಿ ರೋಷನ್ ಹೆಗ್ಡೆ ವಿರುದ್ಧ ಹೆಬ್ಬಗೋಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ವೀರಸಂದ್ರ ನಿವಾಸಿ ಪ್ರಶಾಂತ್ (35) ಎಂದು ಗುರುತಿಸಲಾಗಿದೆ. ಹೆಬ್ಬಗೋಡಿಯ ಕಮ್ಮಸಂದ್ರದಲ್ಲಿ ಭಾನುವಾರ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದ್ದು, ಹಲವು ಸ್ನೇಹಿತರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಸಂಜೆ 6 ಗಂಟೆ ಸುಮಾರಿಗೆ ಪಂದ್ಯಾವಳಿ ಮುಗಿದ ಬಳಿಕ ಕೆಲವರು ತೆರಳಿದ್ದು, ಉಳಿದ ಸ್ನೇಹಿತರು ಮೈದಾನದ ಒಂದು ಬದಿಯಲ್ಲಿ ಕುಳಿತು ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದರು.
ಆ ಸಂದರ್ಭದಲ್ಲಿ ಪ್ರಶಾಂತ್ ಸಿಗರೇಟ್ ಹಚ್ಚಲು ರೋಷನ್ ಬಳಿ ಲೈಟರ್ ಕೇಳಿದ್ದಾನೆ. ಈ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಕೋಪೋದ್ರಿಕ್ತನಾದ ರೋಷನ್ ಪ್ರಶಾಂತ್ಗೆ ಕೈಗಳಿಂದ ಹೊಡೆದಿದ್ದಾನೆ. ಸ್ಥಳದಲ್ಲಿದ್ದ ಇತರ ಸ್ನೇಹಿತರು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದ್ದಾರೆ.
ಆದರೆ, ರಾತ್ರಿ ಸುಮಾರು 8.30ರ ವೇಳೆಗೆ ರೋಷನ್ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗಲು ಮುಂದಾಗುತ್ತಿದ್ದಾಗ ಪ್ರಶಾಂತ್ ಕಾರಿನ ಬಳಿ ತೆರಳಿ ಡೋರ್ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕಾರು ಚಲಾಯಿಸಿದರೂ ಪ್ರಶಾಂತ್ ಡೋರ್ ಬಿಡದ ಕಾರಣ ರೋಷನ್ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದು, ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಪ್ರಶಾಂತ್ ಗಂಭೀರವಾಗಿ ಗಾಯಗೊಂಡಿದ್ದು, ಸ್ನೇಹಿತರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಘಟನೆಯ ದೃಶ್ಯಾವಳಿ ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಪೊಲೀಸರು ಅದನ್ನು ಪರಿಶೀಲಿಸುತ್ತಿದ್ದಾರೆ. ಈ ಕುರಿತು ಹೆಬ್ಬಗೋಡಿ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.