ಕಂದಕೂರಿಗೆ ಸಾಗರೋಪಾದಿಯಲ್ಲಿ ಹರಿದು ಬಂದ ಜನ
ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರರ ದ್ವಿತೀಯ ಪುಣ್ಯಸ್ಮರಣೆ
ಯಾದಗಿರಿ: ಹಿರಿಯ ರಾಜಕೀಯ ಧುರೀಣ, ಗುರಮಠಕಲ್ ಕ್ಷೇತ್ರದ ಮಾಜಿ ಶಾಸಕ ದಿವಂಗತ ಲಿಂ. ನಾಗನಗೌಡ ಕಂದಕೂರ ಅವರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮವು ಬುಧವಾರ ಗುರಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಅವರ ತೋಟದಲ್ಲಿ ಭಕ್ತಿಭಾವ ಹಾಗೂ ಜನಸಾಗರದ ನಡುವೆ ಜರುಗಿತು.
ತೋಟದಲ್ಲಿರುವ ಕಂದಕೂರರ ಸ್ಮಾರಕವನ್ನು ಪುಷ್ಪಗಳಿಂದ ಸಿಂಗಾರಗೊಳಿಸಲಾಗಿತ್ತು. ಬೆಳಿಗ್ಗೆ ಕಂದಕೂರ ಪರಿವಾರದಿಂದ ಸಮಾಧಿಗೆ ಶಾಸ್ತ್ರೋಕ್ತ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ವೇಳೆಗೆ ಯಾದಗಿರಿ ಸೇರಿದಂತೆ ನೆರೆಯ ಕಲಬುರಗಿ, ರಾಯಚೂರು, ಬೀದರ್ ಜಿಲ್ಲೆಗಳು ಹಾಗೂ ಗುರಮಠಕಲ್ ಕ್ಷೇತ್ರದ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ನಾಗನಗೌಡ ಕಂದಕೂರರ ಒಡನಾಡಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಸಾಗರೋಪಾದಿಯಲ್ಲಿ ಆಗಮಿಸಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಜನಸಂದಣಿ ನಿಯಂತ್ರಣಕ್ಕೆ ಸ್ವಯಂಸೇವಕರು ಕೆಲಕಾಲ ಪರದಾಡುವಂತಾಯಿತು. ಅಪಾರ ಸಂಖ್ಯೆಯಲ್ಲಿ ಮಹಿಳೆಯರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ವಿವಿಧ ಮಠಾಧೀಶರು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ದಿವಂಗತ ನಾಯಕನಿಗೆ ಗೌರವ ಅರ್ಪಿಸಿದರು.
ನಾಗನಗೌಡ ಕಂದಕೂರರು ತಮ್ಮ ಜೀವಿತಾವಧಿಯಲ್ಲಿ ಜನರೊಂದಿಗೆ ಹೊಂದಿದ್ದ ಆಪ್ತತೆ ಮತ್ತು ಪ್ರೀತಿ ಎಷ್ಟರ ಮಟ್ಟಿಗೆ ಆಳವಾಗಿತ್ತು ಎಂಬುದಕ್ಕೆ ಈ ಪುಣ್ಯಸ್ಮರಣೆಗೆ ಸ್ವಯಂ ಪ್ರೇರಣೆಯಿಂದ ಹರಿದು ಬಂದ ಜನರೇ ಸಾಕ್ಷಿಯಾಗಿದರು. ಅಧಿಕಾರದಲ್ಲಿರಲಿ, ಇಲ್ಲದಿರಲಿ ತನ್ನ ಬಳಿ ಬಂದ ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಕಂಡು, ಕಪ್ ಚಹಾ ಕುಡಿಸಿಯೇ ಕಳುಹಿಸುತ್ತಿದ್ದ ಅವರ ಸರಳತೆ ಹಾಗೂ ಮಾನವೀಯತೆ ಇಂದಿಗೂ ಗುರಮಠಕಲ್ ಕ್ಷೇತ್ರದ ಜನರ ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದು ಅಭಿಮಾನಿಗಳು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಿದ್ರಾಮಪ್ಪಗೌಡ ಯಕ್ಷಂತಿ, ಗೌಡಪ್ಪಗೌಡ ಮದರ್ಕಲ್, ಶ್ರೀನಿವಾಸರೆಡ್ಡಿ ಕಂದಕೂರ, ಡಾ. ಅಶೋಕರಡ್ಡಿ ವಡವಟ್, ರಾಜೇಂದ್ರರೆಡ್ಡಿ ಹಂಚಿನಾಳ, ಮಲ್ಲಿಕಾರ್ಜುನರೆಡ್ಡಿ ಕಂದಕೂರ, ಶಾಸಕ ಶರಣಗೌಡ ಕಂದಕೂರ, ಮಹೇಂದ್ರರೆಡ್ಡಿ ಕಂದಕೂರ, ವೆಂಕಟರೆಡ್ಡಿ ಯಕ್ಷಂತಿ, ಸುಜೀವ್ ಪಾಟೀಲ್ ಮಾನ್ವಿ, ರಾಕೇಶರೆಡ್ಡಿ ಯಕ್ಷಂತಿ, ಲಿಂಗಣ್ಣಗೌಡ ಕೊಡಮ್ನಳ್ಳಿ, ಡಾ. ಅಶೋಕರಡ್ಡಿ ಅಮೀನಗಡ ಸೇರಿದಂತೆ ಕಂದಕೂರ ಪರಿವಾರ, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಬಾಳೆ ಎಲೆಯಲ್ಲಿ ಶಿಸ್ತುಬದ್ಧ ಭೋಜನ ವ್ಯವಸ್ಥೆ
ಆತಿಥ್ಯದ ವಿಷಯದಲ್ಲಿ ಮೊದಲಿನಿಂದಲೂ ಹೆಸರು ಪಡೆದಿರುವ ಕಂದಕೂರ ಪರಿವಾರ, ಈ ಪುಣ್ಯಸ್ಮರಣೆಯಲ್ಲಿಯೂ ಅದೇ ಸಂಪ್ರದಾಯವನ್ನು ಮುಂದುವರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಮಾರು 6 ರಿಂದ 7 ಸಾವಿರ ಜನರಿಗೆ ಟೇಬಲ್ ವ್ಯವಸ್ಥೆಯೊಂದಿಗೆ ಬಾಳೆ ಎಲೆಯಲ್ಲಿ ಭೋಜನ ನೀಡಲಾಯಿತು. ಬಿಸಿಬಿಸಿ ಹೋಳಿಗೆ, ಗುಲಾಬ್ ಜಾಮೂನು, ಮಿರ್ಚಿ ಬಜ್ಜಿ, ಪೂರಿ, ಕೆಂಪು ಚಟ್ನಿ, ಮಸಾಲ ರೈಸ್ ಹಾಗೂ ರೈತಾವನ್ನು ಜನತೆ ಸವಿದರು.
ಮೂರು ಎಕರೆ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈ ಎಲ್ಲಾ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ಮಲ್ಲಿಕಾರ್ಜುನರೆಡ್ಡಿ ಕಂದಕೂರ ಹಾಗೂ ಶಾಸಕ ಶರಣಗೌಡ ಕಂದಕೂರ ಖುದ್ದಾಗಿ ಮುಂದೆ ನಿಂತು ನಿಭಾಯಿಸಿದರು.