Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಎಪ್ಸ್ಟೀನ್ ಜೊತೆ ಹರ್ದೀಪ್ ಪುರಿ ಭೇಟಿ: ಅಮೆರಿಕದ ದಾಖಲೆಗಳಲ್ಲಿ ಫೋಟೊ ಬಹಿರಂಗ

ಹೊಸದಿಲ್ಲಿ, ಅ. 21: ಲೈಂಗಿಕ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಕುಖ್ಯಾತ ಅಮೆರಿಕನ್ ಉದ್ಯಮಿ ಜೆಫ್ರಿ ಎಪ್ಸ್ಟೀನ್ ಅವರನ್ನು ಅಂತರರಾಷ್ಟ್ರೀಯ ಶಾಂತಿ ಸಂಸ್ಥೆಯ (ಐಪಿಐ) ನಿಯೋಗದ ಭಾಗವಾಗಿ ಭೇಟಿಯಾಗಿದ್ದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ನೀಡಿದ್ದ ಹೇಳಿಕೆಯ ಕುರಿತು ಹೊಸ ಪ್ರಶ್ನೆಗಳು ಉದ್ಭವಿಸಿವೆ. ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಛಾಯಾಚಿತ್ರಗಳಲ್ಲಿ ಪುರಿ ಅವರು ಎಪ್ಸ್ಟೀನ್ ಎದುರು ಏಕಾಂಗಿಯಾಗಿ ಕುಳಿತಿರುವುದು ಕಂಡುಬಂದಿದೆ.

ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಈ ಛಾಯಾಚಿತ್ರಗಳು ಎಪ್ಸ್ಟೀನ್‌ಗೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ಡೇಟಾಸೆಟ್ 9ರ ಭಾಗವಾಗಿವೆ ಎಂದು 'ದಿ ವೈರ್' ವರದಿ ಮಾಡಿದೆ.

ಚಿತ್ರಗಳಲ್ಲಿ ಸೂಟ್ ಧರಿಸಿರುವ ಪುರಿ ಅವರು ಕಪ್ಪು ಟರ್ಟಲ್‌ನೆಕ್ ಸ್ವೆಟರ್ ಧರಿಸಿರುವಂತೆ ಕಾಣುವ ಎಪ್ಸ್ಟೀನ್ ಎದುರು ಕುಳಿತಿದ್ದಾರೆ. ಇಬ್ಬರೂ ಪ್ರಾಣಿಗಳ ಚಿತ್ರಗಳಿರುವ ಹೊದಿಕೆಯ ಕುರ್ಚಿಗಳಲ್ಲಿ ಕುಳಿತಿದ್ದು, ನಡುವಿನ ಮೇಜಿನ ಮೇಲೆ ಕೆಲವು ದಾಖಲೆಗಳು ಹಾಗೂ ಇತರ ವಸ್ತುಗಳು ಕಾಣಿಸುತ್ತವೆ.

ಈ ಭೇಟಿಗೆ ಸಂಬಂಧಿಸಿದ ಕನಿಷ್ಠ 10 ಛಾಯಾಚಿತ್ರಗಳು ನ್ಯಾಯಾಂಗ ಇಲಾಖೆಯ ಕಡತಗಳಲ್ಲಿವೆ. ಎಲ್ಲ ಚಿತ್ರಗಳಲ್ಲಿಯೂ ಬಹುತೇಕ ಒಂದೇ ದೃಶ್ಯವಿದ್ದು, ಕ್ಯಾಮೆರಾ ಕೋನದಲ್ಲಿ ಮಾತ್ರ ವ್ಯತ್ಯಾಸವಿದೆ ಎಂದು ವರದಿ ತಿಳಿಸಿದೆ.

ಯಾವ ಭೇಟಿಯ ಚಿತ್ರವೆಂಬುದು ನೆನಪಿಲ್ಲ: ಪುರಿ ಕಚೇರಿ

ಛಾಯಾಚಿತ್ರಗಳು ಯಾವ ಭೇಟಿಗೆ ಸಂಬಂಧಿಸಿವೆ ಹಾಗೂ ಅವುಗಳನ್ನು ತೆಗೆಯುವ ಮೊದಲು ಅಥವಾ ನಂತರ ಬೇರೆ ಯಾರಾದರೂ ಹಾಜರಿದ್ದರೇ ಎಂಬುದು ಪುರಿ ಅವರಿಗೆ ನೆನಪಿಲ್ಲ ಎಂದು ಅವರ ಕಚೇರಿ ಸ್ಪಷ್ಟಪಡಿಸಿದೆ.

'ದಿ ವೈರ್' ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಕಚೇರಿ, ಎಪ್ಸ್ಟೀನ್ ಅವರನ್ನು ಎಂದಿಗೂ ಏಕಾಂಗಿಯಾಗಿ ಭೇಟಿಯಾಗಿರಲಿಲ್ಲ ಎಂದು ಪುರಿ ಹೇಳಿಕೊಂಡಿಲ್ಲ ಎಂದು ತಿಳಿಸಿದೆ.

ಫೆಬ್ರವರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪುರಿ ಅವರು ಎಪ್ಸ್ಟೀನ್ ಪರಿಚಯವಾದ ಸಂದರ್ಭವನ್ನು ವಿವರಿಸಿದ್ದರು. ಐಪಿಐನಲ್ಲಿ ಅವರ ಮೇಲಧಿಕಾರಿಯಾಗಿದ್ದ ನಾರ್ವೆಯ ಹಿರಿಯ ರಾಜತಾಂತ್ರಿಕ ಟೆರ್ಜೆ ರೋಡ್-ಲಾರ್ಸೆನ್ ಅವರಿಗೆ ಎಪ್ಸ್ಟೀನ್ ಪರಿಚಯವಿತ್ತು. ಅವರ ನೇತೃತ್ವದ ನಿಯೋಗದ ಭಾಗವಾಗಿ ಮೊದಲ ಭೇಟಿ ನಡೆದಿತ್ತು ಎಂದು ಕಚೇರಿ ಹೇಳಿದೆ.

ಸುಮಾರು ಒಂದು ದಶಕದ ಹಿಂದಿನ ಭೇಟಿಗೆ ಸಂಬಂಧಿಸಿದ ಛಾಯಾಚಿತ್ರಗಳಾಗಿರುವುದರಿಂದ ಆ ಸಂದರ್ಭದ ಎಲ್ಲ ವಿವರಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ.

ಈ ಚಿತ್ರಗಳು ಹೊಸ ಸಂಗತಿಯನ್ನು ಬಹಿರಂಗಪಡಿಸುವುದಿಲ್ಲ. ಬದಲಾಗಿ, ಪುರಿ ಅವರು ಮೊದಲಿನಿಂದಲೂ ನೀಡುತ್ತಿರುವ ವಿವರಣೆಯನ್ನೇ ದೃಢಪಡಿಸುತ್ತವೆ. ದಾಖಲೆಗಳು ಮತ್ತು ಟಿಪ್ಪಣಿಗಳೊಂದಿಗೆ ವೃತ್ತಿಪರ ವಾತಾವರಣದಲ್ಲಿ ನಡೆದ ಸಭೆಗಳಿವು ಎಂದು ಕಚೇರಿ ಸಮರ್ಥಿಸಿಕೊಂಡಿದೆ.

ಎಪ್ಸ್ಟೀನ್ ಅವರ ಖಾಸಗಿ ದ್ವೀಪಕ್ಕೆ ಪುರಿ ಎಂದಿಗೂ ಭೇಟಿ ನೀಡಿರಲಿಲ್ಲ. ಇಬ್ಬರ ನಡುವಿನ ಸಂಪರ್ಕ ಸಂಪೂರ್ಣವಾಗಿ ವೃತ್ತಿಪರ ಸ್ವರೂಪದ್ದಾಗಿತ್ತು. ಭಾರತದ ಆರ್ಥಿಕತೆ ಮತ್ತು ಡಿಜಿಟಲ್ ಕ್ಷೇತ್ರದ ಹೂಡಿಕೆ ಅವಕಾಶಗಳ ಬಗ್ಗೆ ಅಂತರರಾಷ್ಟ್ರೀಯ ಉದ್ಯಮಿಗಳಲ್ಲಿ ಆಸಕ್ತಿ ಮೂಡಿಸುವುದೇ ಸಂವಹನದ ಉದ್ದೇಶವಾಗಿತ್ತು ಎಂದು ಸ್ಪಷ್ಟಪಡಿಸಿದೆ.

ಎಪ್ಸ್ಟೀನ್‌ರನ್ನು 3ರಿಂದ 4 ಬಾರಿ ಭೇಟಿಯಾಗಿದ್ದೆ: ಪುರಿ

ಫೆಬ್ರವರಿ 11ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪುರಿ, 2009ರಲ್ಲಿ ನ್ಯೂಯಾರ್ಕ್‌ನ ವಿಶ್ವಸಂಸ್ಥೆಯಲ್ಲಿನ ಭಾರತದ ರಾಜತಾಂತ್ರಿಕ ನಿಯೋಗಕ್ಕೆ ಸೇರಿದ ನಂತರ 2017ರಲ್ಲಿ ಕೇಂದ್ರ ಸಚಿವರಾಗುವವರೆಗಿನ ಅವಧಿಯಲ್ಲಿ ಎಪ್ಸ್ಟೀನ್ ಅವರನ್ನು ಮೂರು ಅಥವಾ ಗರಿಷ್ಠ ನಾಲ್ಕು ಬಾರಿ ಭೇಟಿಯಾಗಿದ್ದಾಗಿ ತಿಳಿಸಿದ್ದರು.

ಐಪಿಐನಲ್ಲಿ ತಮ್ಮ ಮೇಲಧಿಕಾರಿಯಾಗಿದ್ದ ಟೆರ್ಜೆ ರೋಡ್-ಲಾರ್ಸೆನ್ ಅವರಿಗೆ ಎಪ್ಸ್ಟೀನ್ ಪರಿಚಯವಿದ್ದ ಕಾರಣ, ಸಂಸ್ಥೆಯ ನಿಯೋಗದ ಭಾಗವಾಗಿ ಕೆಲವು ಭೇಟಿಗಳು ನಡೆದಿದ್ದವು ಎಂದು ವಿವರಿಸಿದ್ದರು.

ಆದರೆ, ಇದೀಗ ಬಹಿರಂಗಗೊಂಡಿರುವ ಚಿತ್ರಗಳಲ್ಲಿ ಇಬ್ಬರೇ ಕಾಣಿಸಿಕೊಂಡಿರುವುದು ಆ ಭೇಟಿಗಳ ಸ್ವರೂಪದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಎಪ್ಸ್ಟೀನ್ ನಿವಾಸದಲ್ಲಿ ಮೂರು ಸಭೆ ನಿಗದಿ

ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಇಮೇಲ್ ದಾಖಲೆಗಳ ಪ್ರಕಾರ, 2014ರ ಜೂನ್‌ನಿಂದ 2017ರ ಜೂನ್‌ವರೆಗೆ ಪುರಿ ಮತ್ತು ಎಪ್ಸ್ಟೀನ್ ನಡುವೆ ಹಲವು ಸಂದೇಶಗಳು ವಿನಿಮಯವಾಗಿದ್ದವು.

ಫೆಬ್ರವರಿ 1ರಂದು 'ದಿ ವೈರ್' ಪ್ರಕಟಿಸಿದ್ದ ವರದಿಯಂತೆ, ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಎಪ್ಸ್ಟೀನ್ ನಿವಾಸದಲ್ಲಿ ಕನಿಷ್ಠ ಮೂರು ಸಭೆಗಳನ್ನು ನಿಗದಿಪಡಿಸಲಾಗಿತ್ತು.

2015ರ ಫೆಬ್ರವರಿ 4, 2016ರ ಜನವರಿ 6 ಹಾಗೂ 2017ರ ಮೇ 19ರಂದು ನ್ಯೂಯಾರ್ಕ್‌ನ 9 ಈಸ್ಟ್ 71ನೇ ಸ್ಟ್ರೀಟ್‌ನಲ್ಲಿರುವ ಎಪ್ಸ್ಟೀನ್ ನಿವಾಸದಲ್ಲಿ ಭೇಟಿಗಳನ್ನು ಏರ್ಪಡಿಸಲಾಗಿತ್ತು. ಎಪ್ಸ್ಟೀನ್ ಅವರ ಸಹಾಯಕಿ ಲೆಸ್ಲಿ ಗ್ರಾಫ್ ಸಭೆಗಳ ವ್ಯವಸ್ಥೆ ಮಾಡಿದ್ದರು.

2015ರ ಜನವರಿ 9ರಂದು ನಿಗದಿಯಾಗಿದ್ದ ಮತ್ತೊಂದು ಸಭೆಯನ್ನು ಎಪ್ಸ್ಟೀನ್ ನ್ಯೂಯಾರ್ಕ್‌ನಲ್ಲಿ ಇಲ್ಲದ ಕಾರಣ ರದ್ದುಗೊಳಿಸಲಾಗಿತ್ತು ಎಂದು ದಾಖಲೆಗಳು ತಿಳಿಸಿವೆ.

ಭಾರತದಲ್ಲಿ ಹೂಡಿಕೆಗೆ ಉದ್ಯಮಿಗಳ ಸಂಪರ್ಕ

2014ರ ಸೆಪ್ಟೆಂಬರ್‌ನಲ್ಲಿ ಎಪ್ಸ್ಟೀನ್ ಅವರು ಪುರಿ ಅವರನ್ನು ಲಿಂಕ್ಡ್‌ಇನ್ ಸಹ ಸಂಸ್ಥಾಪಕ ರೀಡ್ ಹಾಫ್‌ಮನ್ ಅವರಿಗೆ ಪರಿಚಯಿಸಿದ್ದರು.

ಬಳಿಕ ಇಬ್ಬರ ನಡುವೆ ನಡೆದ ಇಮೇಲ್ ಸಂವಹನದಲ್ಲಿ ಭಾರತದ ಡಿಜಿಟಲ್ ಇಂಡಿಯಾ ಯೋಜನೆ, ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಹಾಗೂ ವಿದೇಶಿ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲಾಗಿತ್ತು.

ನವೆಂಬರ್ 13ರಂದು ಹಾಫ್‌ಮನ್ ಅವರಿಗೆ ಕಳುಹಿಸಿದ್ದ ಇಮೇಲ್‌ನಲ್ಲಿ ಭಾರತದ ಇಂಟರ್ನೆಟ್ ಆರ್ಥಿಕತೆಯಲ್ಲಿನ ಹೂಡಿಕೆ ಸಾಧ್ಯತೆಗಳು ಹಾಗೂ ತಂತ್ರಜ್ಞಾನ ಕಂಪನಿಗಳ ವಿಸ್ತರಣೆಗೆ ಇರುವ ಅವಕಾಶಗಳನ್ನು ಪುರಿ ವಿವರಿಸಿದ್ದರು.

ಆದರೆ, ಪುರಿ ಮತ್ತು ಎಪ್ಸ್ಟೀನ್ ನಡುವಿನ ಸಂಪರ್ಕ ಕೇವಲ ಉದ್ಯಮಿಗಳ ಪರಿಚಯಕ್ಕೆ ಸೀಮಿತವಾಗಿರಲಿಲ್ಲ ಎಂಬುದನ್ನು ಇತರ ಇಮೇಲ್‌ಗಳು ಸೂಚಿಸುತ್ತವೆ.

ಎಪ್ಸ್ಟೀನ್ ಸಹಾಯಕನಿಗೆ ಭಾರತೀಯ ವೀಸಾ ಪಡೆಯಲು ನೆರವು

2014ರ ಅಕ್ಟೋಬರ್ 24ರಂದು ಎಪ್ಸ್ಟೀನ್ ಅವರು ಭಾರತದಲ್ಲಿ ನಡೆಯಲಿದ್ದ ಮದುವೆಯೊಂದರಲ್ಲಿ ಭಾಗವಹಿಸಲು ತಮ್ಮ ಸಹಾಯಕನಿಗೆ ಭಾರತೀಯ ವೀಸಾ ಪಡೆಯಲು ನೆರವಾಗುವಂತೆ ಪುರಿ ಅವರನ್ನು ಕೋರಿದ್ದರು.

ಈ ಮನವಿಯನ್ನು ಪುರಿ ಅವರು ಭಾರತದ ಮಾಜಿ ರಾಜತಾಂತ್ರಿಕ ಪ್ರಮೋದ್ ಬಜಾಜ್ ಅವರಿಗೆ ರವಾನಿಸಿ, ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು ಎಂದು ಇಮೇಲ್ ದಾಖಲೆಗಳು ತಿಳಿಸಿವೆ.

ಅದೇ ವರ್ಷದ ಡಿಸೆಂಬರ್‌ನಲ್ಲಿ ಎಪ್ಸ್ಟೀನ್ ಅವರಿಗೆ ಇಮೇಲ್ ಕಳುಹಿಸಿದ್ದ ಪುರಿ, ತಮ್ಮ 'ವಿಶಿಷ್ಟ ದ್ವೀಪ' ಪ್ರವಾಸದಿಂದ ಯಾವಾಗ ಹಿಂದಿರುಗುತ್ತಾರೆ ಎಂದು ವಿಚಾರಿಸಿದ್ದರು.

ಭಾರತದ ಕುರಿತು ಆಸಕ್ತಿ ಮೂಡಿಸುವ ಕೆಲವು ಪುಸ್ತಕಗಳನ್ನು ನೀಡಲು ಹಾಗೂ ಮಾತುಕತೆ ನಡೆಸಲು ಭೇಟಿಯಾಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು.

ನಂತರದ ಸಂದೇಶವೊಂದರಲ್ಲಿ ಪುರಿ, 'ಇದೊಂದು ರೀತಿಯ ಟೆಲಿಪತಿ! ನೀವು ಹಿಂದಿರುಗಿದಾಗ ತಿಳಿಸಿ. ಪ್ರವಾಸವನ್ನು ಚೆನ್ನಾಗಿ ಆನಂದಿಸಿ. ಹಾಗೆ ಮಾಡಲು ನಿಮಗೆ ಯಾರ ಪ್ರೋತ್ಸಾಹವೂ ಬೇಕಿಲ್ಲ' ಎಂಬರ್ಥದಲ್ಲಿ ಬರೆದಿದ್ದರು ಎಂದು ವರದಿ ಉಲ್ಲೇಖಿಸಿದೆ.

ಈ ಇಮೇಲ್‌ಗಳು ಇಬ್ಬರ ನಡುವೆ ವೃತ್ತಿಪರ ವಿಚಾರಗಳ ಹೊರತಾಗಿಯೂ ಅನೌಪಚಾರಿಕ ಸಂವಹನ ನಡೆದಿರುವುದನ್ನು ಸೂಚಿಸುತ್ತವೆ. ಆದರೆ, ಇಂತಹ ಸಂಪರ್ಕ ಅಥವಾ ಭೇಟಿಗಳು ಮಾತ್ರ ಯಾವುದೇ ಅಪರಾಧದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷಿಯಾಗುವುದಿಲ್ಲ.

ಲೈಂಗಿಕ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಎಪ್ಸ್ಟೀನ್

ಜೆಫ್ರಿ ಎಪ್ಸ್ಟೀನ್ 2008ರಲ್ಲಿ ಅಮೆರಿಕದ ಫ್ಲೋರಿಡಾದಲ್ಲಿ ಅಪ್ರಾಪ್ತ ಬಾಲಕಿಗೆ ಸಂಬಂಧಿಸಿದ ವೇಶ್ಯಾವಾಟಿಕೆ ಅಪರಾಧದ ಆರೋಪವನ್ನು ಒಪ್ಪಿಕೊಂಡಿದ್ದ.

2019ರ ಜುಲೈನಲ್ಲಿ ಅಪ್ರಾಪ್ತ ಬಾಲಕಿಯರ ಲೈಂಗಿಕ ಕಳ್ಳಸಾಗಣೆ ಆರೋಪದಡಿ ಆತನನ್ನು ಮತ್ತೆ ಬಂಧಿಸಲಾಗಿತ್ತು. ಅದೇ ವರ್ಷದ ಆಗಸ್ಟ್‌ನಲ್ಲಿ ನ್ಯೂಯಾರ್ಕ್‌ನ ಜೈಲಿನಲ್ಲಿ ಮೃತಪಟ್ಟಿದ್ದ.

ಎಪ್ಸ್ಟೀನ್ ಅವರೊಂದಿಗೆ ಸಂಪರ್ಕ ಹೊಂದಿದ್ದ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಕುರಿತು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ದಾಖಲೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ.

ಇದೀಗ ಹರ್ದೀಪ್ ಸಿಂಗ್ ಪುರಿ ಮತ್ತು ಎಪ್ಸ್ಟೀನ್ ಭೇಟಿಯ ಛಾಯಾಚಿತ್ರಗಳು ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ, ಇಬ್ಬರ ನಡುವಿನ ಸಂಪರ್ಕದ ಸ್ವರೂಪ ಹಾಗೂ ಭೇಟಿಗಳ ಕುರಿತು ನೀಡಿರುವ ವಿವರಣೆಗಳ ಬಗ್ಗೆ ಹೊಸ ಪ್ರಶ್ನೆಗಳು ಎದುರಾಗಿವೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ