LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ತರಾಖಂಡದ ಹರಿದ್ವಾರದಲ್ಲಿರುವ ಬಿಎಚ್‌ಇಎಲ್ ಕಾರ್ಖಾನೆಗೆ ಭೇಟಿ ನೀಡಿದ ಹೆಚ್.ಡಿ. ಕುಮಾರಸ್ವಾಮಿ

ಹರಿದ್ವಾರ (ಉತ್ತರಾಖಂಡ):ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಉತ್ತರಾಖಂಡದ ಹರಿದ್ವಾರದಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ (ಬಿಎಚ್‌ಇಎಲ್) ಕಾರ್ಖಾನೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಚಿವರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು ಹಾಗೂ ಖರೀದಿ ಆದೇಶ ನೀಡಿದ್ದ ಪ್ರಮುಖ ಕೈಗಾರಿಕಾ ಮತ್ತು ರಕ್ಷಣಾ ಉಪಕರಣಗಳ ಹಸ್ತಾಂತರಕ್ಕೆ ಚಾಲನೆ ನೀಡಿದರು. ಇದು ಭಾರತದ ಭಾರೀ ಎಂಜಿನಿಯರಿಂಗ್ ಪೂರಕ ವ್ಯವಸ್ಥೆಯ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ವಿದ್ಯುತ್ ಉತ್ಪಾದನೆ, ಶುದ್ಧ ಇಂಧನ, ರಕ್ಷಣಾ ಉತ್ಪಾದನೆ ಮತ್ತು ಸುಧಾರಿತ ಭಾರೀ ಎಂಜಿನಿಯರಿಂಗ್ ನಂತಹ ಕ್ಷೇತ್ರಗಳಲ್ಲಿ ಭಾರತದ ಕೈಗಾರಿಕಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ವಹಿಸಿದ ಪ್ರಮುಖ ಪಾತ್ರವನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು.

ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಸಾಂಬಶಿವಮೂರ್ತಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಚಿವರ ಜತೆಯಲ್ಲಿ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಬಿಎಚ್‌ಇಎಲ್‌ನಂತಹ ಸಂಸ್ಥೆಗಳು ಕೇವಲ ಉತ್ಪಾದನಾ ಘಟಕಗಳು ಅಷ್ಟೇ ಅಲ್ಲ, ಅವು ರಾಷ್ಟ್ರೀಯ ಸಾಮರ್ಥ್ಯದ ಕಣಜಗಳಾಗಿವೆ ಎಂದು ಒತ್ತಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಕೈಗಾರಿಕಾ ಪೂರಕ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸಿದೆ ಮತ್ತು ಈ ದೃಷ್ಟಿಕೋನವನ್ನು ಸಾಧಿಸುವಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಕೇಂದ್ರ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

*ಶುದ್ಧ ಇಂಧನಕ್ಕೆ ಉತ್ತೇಜನ:*

ಕಾರ್ಖಾನೆಗೆ ಭೇಟಿ ನೀಡಿದ ಸಮಯದಲ್ಲಿ, ಕೇಂದ್ರ ಸಚಿವರು ಹರಿದ್ವಾರ ಕಾರ್ಖಾನೆಯಲ್ಲಿ 5 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಈ ಯೋಜನೆಯು ಸುಸ್ಥಿರ ಇಂಧನ ಪರಿಹಾರಗಳತ್ತ ಬಿಎಚ್‌ಇಎಲ್‌ನ ಪರಿವರ್ತನೆಯಲ್ಲಿ ಮಹತ್ವದ ಹೆಜ್ಜೆಯನ್ನು ತೋರಿಸುತ್ತದೆ ಎಂದು ನುಡಿದರು.

ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಲ್ಲಿ 5 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಿ ರಾಷ್ಟ್ರಕ್ಕೆ ಅರ್ಪಿಸುತ್ತಿರುವುದು ಬಹಳ ಸಂತೋಷ ಉಂಟು ಮಾಡಿದೆ. 11,000ಕ್ಕೂ ಹೆಚ್ಚು ಸೌರ ಮಾಡ್ಯೂಲ್‌ಗಳು ಮತ್ತು ವಾರ್ಷಿಕ ಸುಮಾರು 90 ಲಕ್ಷ ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಈ ಯೋಜನೆಯು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಶುದ್ಧ ಇಂಧನ ಉತ್ಪಾದನೆಗೆ ಕೊಡುಗೆ ನೀಡುತ್ತದೆ. ಈ ಉಪಕ್ರಮವು ಬಿಎಚ್‌ಇಎಲ್ ಹರಿದ್ವಾರದ ಶುದ್ಧ ಇಂಧನದ ಬಳಕೆಗೆ ಉತ್ತಮ ಉದಾಹರಣೆಯಾಗಿದೆ. 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಪೂರ್ಣವಾಗಿದೆ" ಎಂದು ಬೃಹತ್ ಕೈಗಾರಿಕೆ ಸಚಿವರು ಒತ್ತಿ ಹೇಳಿದರು.

ಈ ಸ್ಥಾವರವು ವಾರ್ಷಿಕವಾಗಿ ಸುಮಾರು 90 ಲಕ್ಷ ಯೂನಿಟ್ ಸೌರ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ. ಇದು ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಸಚಿವರು ಬಿಎಚ್‌ಇಎಲ್‌ನ ಸೆಂಟ್ರಲ್ ಫೌಂಡ್ರಿ ಮತ್ತು ಫೋರ್ಜ್ ಪ್ಲಾಂಟ್ ನಲ್ಲಿ 30 ಟನ್ ಸಾಮರ್ಥ್ಯದ ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ (ಇಎಎಫ್) ಅನ್ನು ಉದ್ಘಾಟಿಸಿದರು, ಇದು ಕಂಪನಿಯ ಲೋಹ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಈ ಸೌಲಭ್ಯವನ್ನು ಪರಿಶೀಲಿಸಿದ ಸಚಿವರು; ಈ ಘಟಕದಲ್ಲಿರುವ ಕುಲುಮೆಯು ವಿದ್ಯುತ್, ಭಾರೀ ಎಂಜಿನಿಯರಿಂಗ್ ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಬಳಸುವ ನಿರ್ಣಾಯಕ ಘಟಕಗಳಿಗೆ ಭಾರತದ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದು ಹೇಳಿದರು.

*ಸ್ಥಳೀಯವಾಗಿಯೇ ರಕ್ಷಣಾ ಸಲಕರಣೆಗಳ ಉತ್ಪಾದನೆ:*

ಇದೇ ಸಂದರ್ಭದಲ್ಲಿ ಭಾರತೀಯ ನೌಕಾಪಡೆಗಾಗಿ ನವೀಕರಿಸಿದ ಸೂಪರ್ ರಾಪಿಡ್ ಗನ್ ಮೌಂಟ್ (SRGM) ಅನ್ನು ಸಚಿವರು ಹಸ್ತಾಂತರಿಸಿ, ಅದರ ಸಾಗಣೆ ವಾಹನಕ್ಕೆ ಚಾಲನೆ ನೀಡಿದರು. ಈ ಮುಂದುವರಿದ ನೌಕಾ ಶಸ್ತ್ರಾಸ್ತ್ರ ವ್ಯವಸ್ಥೆಯು ವಿಮಾನ ವಿರೋಧಿ ಮತ್ತು ಮೇಲ್ಮೈ ವಿರೋಧಿ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ 35 ಕಿಲೋಮೀಟರ್ ವರೆಗೆ ದಾಳಿಯ ವ್ಯಾಪ್ತಿಯೊಂದಿಗೆ ನಿಮಿಷಕ್ಕೆ 120 ಸುತ್ತುಗಳವರೆಗೆ ಕ್ಷಿಪ್ರವಾಗಿ ಗುಂಡು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ.

ಸೂಪರ್ ರಾಪಿಡ್ ಗನ್ ಮೌಂಟ್ ಮೈಲಿಗಲ್ಲು ಭಾರತದ ರಕ್ಷಣಾ ಉತ್ಪಾದನಾ ವ್ಯವಸ್ಥೆ ಗಣನೀಯವಾಗಿ ಬೆಳೆಯುತ್ತಿರುವುದನ್ನು ಎತ್ತಿ ತೋರಿಸುತ್ತದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾದ ದೃಷ್ಟಿಕೋನವನ್ನು ಮುನ್ನಡೆಸುತ್ತದೆ ಎಂದು ಸಚಿವರು ಹೇಳಿದರು.

*ಟರ್ಬೊ ಜನರೇಟರ್‌ ಗೆ ಚಾಲನೆ:*

ಈ ಸಮಯದಲ್ಲಿ, ಸಚಿವರು, ಬೃಹತ್ ಗಾತ್ರದ ಟರ್ಬೊ ಜನರೇಟರ್‌ನ ರವಾನೆಗೆ ಕೂಡ ಚಾಲನೆ ನೀಡಿದರು. ಇದು ಭಾರತದ ಭಾರೀ ವಿದ್ಯುತ್ ಉತ್ಪಾದನಾ ಸಾಮರ್ಥ್ಯಗಳ ಪ್ರಮಾಣ ಮತ್ತು ಅತ್ಯಾಧುನಿಕತೆಗೆ ಪ್ರತೀಕವಾಗಿದ್ದು, ಬೃಹತ್ ವಿದ್ಯುತ್ ಯೋಜನೆಗಾಗಿ ನಿರ್ಮಿಸಲಾದ ಈ ಜನರೇಟರ್, ಭಾರತದ ಇಂಧನ ಮೂಲಸೌಕರ್ಯಕ್ಕೆ ಅಗತ್ಯವಾದ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಉಪಕರಣಗಳನ್ನು ತಯಾರಿಸುವಲ್ಲಿ ಬಿಎಚ್‌ಇಎಲ್‌ನ ಪರಿಣತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.

*ಗಂಗಾ ಆರತಿಯಲ್ಲಿ ಪಾಲ್ಗೊಂಡ ಹೆಚ್ಡಿಕೆ ದಂಪತಿ*

ಬಿಎಚ್‌ಇಎಲ್ ಕಾರ್ಖಾನೆಗೆ ಭೇಟಿ ನೀಡಿದ ಬಳಿಕ ಕೇಂದ್ರದ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಹರಿದ್ವಾರದ ಹರ ಕೆ ಪೂಡಿ (ಹರನ ಪಾದ) ಯಲ್ಲಿ ಗಂಗಾ ಆರತಿಯನ್ನು ನೆರವೇರಿಸಿದರು.

ಅದಕ್ಕೂ ಮುನ್ನ ತಾಯಿ ತಂಗಿಗೆ ಪೂಜೆ ಸಲ್ಲಿಸಿದ ದಂಪತಿ, ಅಂತಿಮವಾಗಿ ಗಂಗಾ ಆರತಿಯಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು; ಇದು ದಿವ್ಯಾನುಭೂತಿ. ತಾಯಿ ಗಂಗೆಯ ಮಡಿಲಲ್ಲಿ ಆ ತಾಯಿಗೆ ಪೂಜೆ ಸಲ್ಲಿಸಿದ ಧನ್ಯತೆ ನನ್ನದು. ಇಲ್ಲಿನ ವಾತಾವರಣ, ಭಕ್ತಿ ಪರವಶತೆ ನಮ್ಮನ್ನು ಪರವಶಗೊಳಿಸುತ್ತದೆ ಎಂದು ಹೇಳಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ