ಜನದಟ್ಟಣೆಯಿಂದ ಹೈರಾಣಾದ ಜನತೆ; ಬೈಪಾಸ್ ರಸ್ತೆ ಕಾಮಗಾರಿ ಕುಂಠಿತ ಆರೋಪ
ಅಥಣಿ (ಬೆಳಗಾವಿ): ಬೆಳಗಾವಿ ಜಿಲ್ಲೆಯ ಅಥಣಿ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನ ಸಂಚಾರದ ಒತ್ತಡದಿಂದ ಟ್ರಾಫಿಕ್ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಅನಂತಪುರ ಸರ್ಕಲ್‌ನಿಂದ ಹಿಡಿದು ಹಳ್ಯಾಳ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮೂಲಕ ಸಿದ್ದೇಶ್ವರ ದೇವಸ್ಥಾನದವರೆಗೆ ಸಾಗುವ ಮುಖ್ಯ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಾಗಿ, ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಕುರಿತು ಮಾಧ್ಯಮ ಹಾಗೂ ಪತ್ರಕರ್ತರೊಂದಿಗೆ ಮಾತನಾಡಿದ ಜೆಡಿಎಸ್ ಕಾರ್ಯಕರ್ತ ಇಮ್ತಿಯಾಜ ಹಿಪ್ಪರಗಿ, ಅನಂತಪುರ ಸರ್ಕಲ್–ಹಳ್ಯಾಳ ಸರ್ಕಲ್–ಅಂಬೇಡ್ಕರ್ ಸರ್ಕಲ್ ಮಾರ್ಗದಲ್ಲಿ ದ್ವಿಚಕ್ರ ವಾಹನಗಳು, ಸರಕು ವಾಹನಗಳು ಸೇರಿದಂತೆ ವಿವಿಧ ರೀತಿಯ ವಾಹನಗಳ ಸಂಚಾರ ಒಂದೇ ರಸ್ತೆಯಲ್ಲಿ ನಡೆಯುತ್ತಿರುವುದರಿಂದ, ವಿಶೇಷವಾಗಿ ಹಳ್ಯಾಳ ಸರ್ಕಲ್ ಹಾಗೂ ಅಂಬೇಡ್ಕರ್ ಸರ್ಕಲ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಹೇಳಿದರು.
ಸರ್ಕಲ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್, ರೋಡ್ ಬ್ರೇಕರ್‌ಗಳು ಹಾಗೂ ಸಮರ್ಪಕ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆಯ ಕೊರತೆ ಇದೆ. ಟ್ರಾಫಿಕ್ ಪೊಲೀಸ್ ಇಲಾಖೆಯೂ ಸಮಸ್ಯೆ ನಿವಾರಣೆಗೆ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜನದಟ್ಟಣೆಯನ್ನು ನಿಯಂತ್ರಿಸಲು ಬೈಪಾಸ್ ರಸ್ತೆ ನಿರ್ಮಾಣ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.
ಅಂಬೇಡ್ಕರ್ ಸರ್ಕಲ್‌ನಿಂದ ನಂದಗಾಂವ್ ಪಂಪ್‌ವರೆಗೆ ಹಾಗೂ ಅಂಬೇಡ್ಕರ್ ಸರ್ಕಲ್‌ನಿಂದ ಹಳ್ಯಾಳ ಸರ್ಕಲ್‌ವರೆಗೆ ಭಾರೀ ಜನದಟ್ಟಣೆ ಇರುವುದನ್ನು ಯಾರಾದರೂ ನೇರವಾಗಿ ನೋಡಬಹುದು. ಈ ಸಮಸ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅನಂತಪುರ ಸರ್ಕಲ್‌ನಿಂದ ಸಿದ್ದೇಶ್ವರ ದೇವಸ್ಥಾನದವರೆಗೆ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಭಾಗಿರಥಿ ಹಳ್ಳ ಯೋಜನೆಯಡಿ ಸುಮಾರು 10 ಕೋಟಿ ರೂ. ಅನುದಾನವನ್ನು ಮಾನ್ಯ ಶಾಸಕರು ತಂದಿದ್ದರೂ, ಆ ಕಾಮಗಾರಿ ಇನ್ನೂ ಕುಂಠಿತವಾಗಿರುವುದು ವಿಷಾದಕರ ಎಂದು ಇಮ್ತಿಯಾಜ ಹಿಪ್ಪರಗಿ ಆರೋಪಿಸಿದರು.
ಈ ಬೈಪಾಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಈಗಿರುವ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ, ಸಂಪೂರ್ಣವಾಗಿ ದುರಸ್ತಿ ಮಾಡಿದಲ್ಲಿ, ಹಳ್ಯಾಳ ಸರ್ಕಲ್ ಮತ್ತು ಅಂಬೇಡ್ಕರ್ ಸರ್ಕಲ್‌ನಲ್ಲಿನ ಜನದಟ್ಟಣೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಅವರು ಹೇಳಿದರು. ಈ ಕುರಿತು ಮಾನ್ಯ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನಗರದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ಪುರಸಭೆ, ತಾಲೂಕು ಆಡಳಿತ, ಜಿಲ್ಲಾಡಳಿತ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಮುಖ್ಯಮಂತ್ರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅಥಣಿ ನಗರದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವರೇ?
ಅಥವಾ ಈ ಸಮಸ್ಯೆ ಯಥಾಸ್ಥಿತಿಯಲ್ಲೇ ಮುಂದುವರಿಯುವುದೇ?
ಇದು ಇಂದು ಅಥಣಿ ಜನತೆ ಕೇಳುತ್ತಿರುವ ಪ್ರಮುಖ ಪ್ರಶ್ನೆಯಾಗಿದೆ.