ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಇದೀಗ ಕೈಗೊಂಡಿರುವ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ಮುಂದಕ್ಕೆ ಹಾಕಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಆಗ್ರಹಪಡಿಸಿದರು.
ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು; ನವೆಂಬರ್ 15ರಂದು ಕೆಪಿಎಸ್ಸಿ ವತಿಯಿಂದ ನಡೆಯಲಿರುವ 319 ಗೆಜೆಟೆಡ್ ಪ್ರೊಬೇಷನರಿ (KAS) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡುವಂತೆ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕೆಪಿಎಸ್ಸಿಯಲ್ಲಿ ಕಳೆದ 3-4 ವರ್ಷಗಳಿಂದ ನಡೆದಿರುವ ಪರೀಕ್ಷೆ, ನೇಮಕಾತಿ ಅಕ್ರಮಗಳ ಬಗ್ಗೆ ಇಡಿ, ಸಿಐಡಿ ತನಿಖೆಗಳು ನಡೆಯುತ್ತಿವೆ ಹಾಗೂ ಹೈಕೋರ್ಟ್ ಸೂಚನೆಯಂತೆ ಎಸ್ಐಟಿ ಕೂಡ ತನಿಖೆ ನಡೆಸುತ್ತಿದ್ದು, ಹಣದ ವಹಿವಾಟು ನಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆ ಸಂಸ್ಥೆ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಪರೀಕ್ಷೆ ನಡೆಸಿ ನೇಮಕಾತಿ ಮಾಡುತ್ತದೆ ಎಂಬ ನಂಬಿಕೆ ನನಗಿಲ್ಲ. ಅನೇಕ ಉದ್ಯೋಗಾಂಕ್ಷಿಗಳು ಕೂಡ ಇದೇ ದೂರನ್ನು ಮಾಡುತ್ತಿದಾರೆ ಎಂದರು.
ಸಂಸ್ಥೆಯನ್ನು ಸುಧಾರಿಸಲು ಮಾಜಿ ಮಂತ್ರಿಗಳಾದ ಆರ್.ವಿ.ದೇಶಪಾಂಡೆ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಇನ್ನೂ ವರದಿ ನೀಡಿಲ್ಲ. ಫ್ರೀಡಂ ಪಾರ್ಕ್ ನಲ್ಲಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಇಂತಹ ಗೊಂದಲದ ವಾತಾವರಣದಲ್ಲಿ ಪರೀಕ್ಷೆ ನಡೆಸುವುದರಿಂದ ಪ್ರಾಮಾಣಿಕ, ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಸಂಸ್ಥೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸಿ, ಅಲ್ಲಿ ಪಾರದರ್ಶಕತೆ ತಂದ ನಂತರವೇ ಪರೀಕ್ಷೆ ನಡೆಸಬೇಕು ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದರು.
ರೈತರ ಸಂಕಷ್ಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರ:
ಬರಗಾಲದಿಂದ ರೈತರು ಕಂಗಾಲಾಗಿದ್ದರೂ, ಬೆಳೆ ವಿಮೆ ವಿಚಾರದಲ್ಲಿ ರೈತರಿಗೆ ದೊಡ್ಡ ಮೋಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು; ರೈತರು ವಂತಿಗೆ ಕಟ್ಟಿದ್ದರೂ ವಿಮಾ ಕಂಪನಿಗಳು ಅವರಿಗೆ ವಂಚಿಸುತ್ತಿವೆ ಹಾಗೂ ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನ (Matching Grant) ಅಥವಾ ವಂತಿಗೆ ಹಣವನ್ನು ಪಾವತಿಸದೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಬರೀ ಘೋಷಣೆಗಳನ್ನು ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದರು.
ಪ್ಯಾಕೇಜ್ ಆಧರಿತ ಗುತ್ತಿಗೆದಾರ ವ್ಯವಸ್ಥೆ:
ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಬಸ್ ದರ ಏರಿಕೆ ಖಂಡಿಸಿ ಜನರ ಆಕ್ರೋಶ ಭುಗಿಲೆದ್ದಾಗ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿಗಳು ದಿಢೀರನೆ ಪತ್ರಿಕಾಗೋಷ್ಠಿ ಕರೆದು ರೈತರಿಗೆ ₹2,500 ಪರಿಹಾರ ಘೋಷಿಸಿದರು. ಸಚಿವ ಸಂಪುಟ ಸಭೆಯಲ್ಲಿ ₹26,000 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ, ಆದರೆ ಈಗಾಗಲೇ ಕಾಮಗಾರಿ ಮುಗಿಸಿರುವ ಗುತ್ತಿಗೆದಾರರಿಗೆ ₹39,000 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ಹಳೆಯ ಬಾಕಿ ನೀಡದೆ ಹೊಸ ಯೋಜನೆಗಳನ್ನು ಘೋಷಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರವು 'ಪ್ಯಾಕೇಜ್ ಸಿಸ್ಟಮ್' ಜಾರಿಗೆ ತಂದು ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಆಂಧ್ರಪ್ರದೇಶ, ಉತ್ತರ ಪ್ರದೇಶದವರಿಗೆ ಗುತ್ತಿಗೆ ನೀಡುತ್ತಿದೆ. ಇದರಿಂದ ರಾಜ್ಯದ ಗುತ್ತಿಗೆದಾರರ ಖಾತೆಗಳು ಎನ್ ಪಿಎ (NPA) ಆಗುತ್ತಿವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ರಾಜೀವ್ ಗಾಂಧಿ ವೈದ್ಯಕೀಯ ವಿವಿ ಬಗ್ಗೆ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ಸಿಗರು:
ರಾಮನಗರದಲ್ಲಿ ಕಾಂಗ್ರೆಸ್ ನಾಯಕರು ಕಾರ್ಯಕ್ರಮವೊಂದನ್ನು ಮಾಡಿ, ಅಲ್ಲಿನ ಮೆಡಿಕಲ್ ಕಾಲೇಜುಗಳೆಲ್ಲ ತಮ್ಮದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದನ್ನು ಸಚಿವರು ಲೇವಡಿ ಮಾಡಿದರು. 2006ರಲ್ಲಿ ತಾವೇ ಮುಖ್ಯಮಂತ್ರಿಯಾಗಿದ್ದಾಗ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ರಾಮನಗರಕ್ಕೆ ಸ್ಥಳಾಂತರಿಸುವ ತೀರ್ಮಾನ ಕೈಗೊಂಡು ಅನುದಾನ ನೀಡಲಾಗಿತ್ತು. ಅದನ್ನು ಈಗ ಕಾಂಗ್ರೆಸ್ಸಿನವರು ನಾವು ತಂದಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮೈತ್ರಿ ಸರ್ಕಾರದಲ್ಲಿ ತಾವೇ ಒಪ್ಪಿಗೆ ನೀಡಿದ್ದಾಗಿ ತಿಳಿಸಿದರು.
ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ 20 ನಾಯಕರು ಜೆಡಿಎಸ್ ಸೇರ್ಪಡೆ
ಕುಣಿಗಲ್ ವಿಧಾನಸಭಾ ಕ್ಷೇತ್ರದ 20ಕ್ಕೂ ಹೆಚ್ಚು ಪ್ರಮುಖ ಕಾಂಗ್ರೆಸ್ ಮುಖಂಡರು ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ ನಾಗರಾಜಯ್ಯ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕೆಂಪಿರೇಗೌಡ, ಶಿವಶಂಕರ, ನಾರಾಯಣಪ್ಪ, ಕೆಂಪಹನಮಯ್ಯ, ಸುರೇಶ್, ಜೆಸಿಬಿ ಗಿರೀಶ್, ಲಕ್ಷ್ಮಣ, ರೇಣುಕಯ್ಯ , ನಂಜೇಶ್, ರಾಮಕೃಷ್ಣಪ್ಪ, ವಸಂತರಾಜು, ಸುರೇಶ್, ಮನು, ಶಿವಕುಮಾರ್, ನಾಗಣ್ಣ, ಗಂಗಣ್ಣ, ರಮೇಶ್, ಶಿವಣ್ಣ ಮುಂತಾದವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕುಣಿಗಲ್ ಕ್ಷೇತ್ರದ ಹಿರಿಯ ಮುಖಂಡರಾದ ರವಿ, ಜಗದೀಶ್ ಹಾಗೂ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷರಾದ ಹೆಚ್.ಎಂ. ರಮೇಶ್ ಗೌಡ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.