ಪ್ರಪಂಚ ಮತ್ತು ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ಯಾರು ನಿರಂತರವಾಗಿ ಕಲಿಯುತ್ತಾರೋ ಅವರೇ ಗೆಲ್ಲುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಐಐಟಿ ದೆಹಲಿಯ 57 ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಧೈರ್ಯದಿಂದ ಹೊಸ ಪರಿಹಾರಗಳನ್ನು ಹುಡುಕುವವರಿಗೆ ಸವಾಲುಗಳು ಅವಕಾಶಗಳಾಗಿ ಬದಲಾಗುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂದು ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಮುಂದಿನ 20-30 ವರ್ಷಗಳಲ್ಲಿ ಏನಾಗುತ್ತದೆ ಎಂದು ಯಾರೂ ಹೇಳಲಾರರು. ನಿಮ್ಮ ಜೀವನದಲ್ಲಿ ಕುತೂಹಲವನ್ನು ಮತ್ತು ಕಲಿಯುವ ಉತ್ಸಾಹವನ್ನು ಜೀವಂತವಾಗಿಡಿ ಎಂದು ಅವರು ಕರೆ ನೀಡಿದರು. ಹೊಸ ಪರಿಸ್ಥಿತಿಗಳು ಮತ್ತು ಸವಾಲುಗಳನ್ನು ಸ್ವೀಕರಿಸುವವರು ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುತ್ತಾರೆ ಮತ್ತು ಐಐಟಿ ದೆಹಲಿಯಲ್ಲಿ ನೀವು ಕಲಿತದ್ದು ಇದನ್ನೇ ಆಗಿದೆ ಎಂದು ಮೋದಿ ತಿಳಿಸಿದರು. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಈಗ ಸ್ವಾವಲಂಬನೆಯತ್ತ ಹೆಜ್ಜೆ ಇಡುತ್ತಿದ್ದು, ನಮ್ಮ ಯುವಕರಿಗೆ ದೇಶದಲ್ಲಿ ಹೊಸ ಕ್ಷೇತ್ರಗಳು ರೂಪುಗೊಳ್ಳುತ್ತಿವೆ ಎಂದರು.
ಜಾಗತಿಕ ಅಧಿಕಾರದ ಸಮತೋಲನವು ಪ್ರತಿ ಕ್ಷಣವೂ ಬದಲಾಗುತ್ತಿದ್ದು, ಇದರ ಹಿಂದೆ ತಂತ್ರಜ್ಞಾನದ ವೇಗವೇ ಪ್ರಮುಖ ಶಕ್ತಿಯಾಗಿದೆ ಎಂದು ಪ್ರಧಾನಿ ಹೇಳಿದರು. ಐಐಟಿ ದೆಹಲಿಯಲ್ಲಿ ಕೃತಕ ಬುದ್ಧಿಮತ್ತೆಗೆ (AI) ಸಂಬಂಧಿಸಿದ ಕೆಲವು ಹೊಸ ಯೋಜನೆಗಳನ್ನು ಆರಂಭಿಸಲಾಗಿದೆ ಎಂದ ಅವರು, ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರವು ಕ್ರಮ ಕೈಗೊಂಡಾಗ ಭಾರತದಿಂದ ಇದನ್ನು ಮಾಡಲು ಸಾಧ್ಯವೇ ಎಂದು ಕೆಲವರು ಪ್ರಶ್ನಿಸಿದ್ದರು, ಆದರೆ ಇಂದು ಮೊದಲ ಸೆಮಿಕಂಡಕ್ಟರ್ ಘಟಕದಲ್ಲಿ ಉತ್ಪಾದನೆ ಆರಂಭವಾಗಿದೆ ಎಂದು ತಿಳಿಸಿದರು. ಚಿಪ್‌ಗಳಿಂದ ಹಿಡಿದು ಹಡಗುಗಳವರೆಗೆ ಎಲ್ಲವೂ ನಿಮ್ಮ ಕೈಗಳಿಂದಲೇ ಇಲ್ಲಿ ನಿರ್ಮಿಸಲ್ಪಡುತ್ತದೆ ಎಂಬ ಗಟ್ಟಿಯಾದ ನಂಬಿಕೆ ನನಗೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಘಟಿಕೋತ್ಸವ ಸಮಾರಂಭದಲ್ಲಿ 587 ಪಿಎಚ್‌ಡಿ ವಿದ್ವಾಂಸರು ಸೇರಿದಂತೆ 3,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು.