ಶಹಾಪುರ: ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ 19.01.2026ರಂದು ಶಹಾಪುರ ತಾಲೂಕು ಪಂಚಾಯತ್ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನಾ ಧರಣಿ–ಸತ್ಯಾಗ್ರಹ ನಡೆಯಿತು. ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ರೈತರು ಹಾಗೂ ಕೂಲಿಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಅಧ್ಯಕ್ಷ ದಾವಲ್ ಸಾಬ್ ನದಾಫ್ ಮಾತನಾಡಿ, ಬೋರ್ಡ್ ಮೇಲೆ ಬರವಣಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ “ಮೋಸದ ಆಟ”ವನ್ನು ವಿವರಿಸಿದರು. ವಿ.ಜಿ. ರಾಮ್ ಜಿ ಹೆಸರಿನ ಯೋಜನೆ ಬಡ ರೈತರು ಹಾಗೂ ಕೂಲಿಕಾರರಿಗೆ ಮಾರಕವಾಗಿದೆ ಎಂದು ಆರೋಪಿಸಿದರು. 2005ರ ಕಾಯ್ದೆಯಂತೆ 100 ದಿನ ಕೆಲಸ ಮಾಡಿದರೆ ಸುಮಾರು ₹37,000 ಸಿಗುತ್ತಿತ್ತು. ಆದರೆ ಈಗ 125 ದಿನ ಕೆಲಸ ನೀಡುತ್ತೇವೆ ಎಂದು ಪ್ರಚಾರ ಮಾಡುತ್ತಿರುವ ಸರ್ಕಾರ ವಾಸ್ತವದಲ್ಲಿ ಕೇವಲ 75 ದಿನ ಮಾತ್ರ ಕೆಲಸ ನೀಡುತ್ತಿದೆ. ದಿನಕ್ಕೆ ₹370 ರೂ. ಲೆಕ್ಕದಲ್ಲಿ 75 ದಿನಕ್ಕೆ ₹27,000 ಮಾತ್ರ ಸಿಗುತ್ತಿದ್ದು, ಉಳಿದ ₹10,000ನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ ಎಂದು ಆರೋಪಿಸಿದರು.
ಈ ಅನ್ಯಾಯದ ವಿರುದ್ಧ ಫೆಬ್ರವರಿ 12ರಂದು ದೇಶವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ರೈತರು, ಕಾರ್ಮಿಕರು, ಕೂಲಿಕಾರರು, ಕಡು ಬಡವರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಅಧ್ಯಕ್ಷ ಚನ್ನಪ್ಪ ಆನೆಗುಂದಿ ಕರೆ ನೀಡಿದರು.
ರೈತರ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಪ್ರತಿ ಎಕರೆಗೆ ₹50,000 ಜಾಮೀನು ರಹಿತ ಸಾಲ ಹಾಗೂ ₹50,000 ಬೆಳೆ ಪರಿಹಾರ ನೀಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಸಾಗರ್, ಜಿಲ್ಲಾ ಉಪಾಧ್ಯಕ್ಷರು ರಂಗಮ್ಮ ಕಟ್ಟಿಮನಿ, ಅಂಬಲಯ್ಯ ಬೇವಿನಕಟ್ಟಿ, ದೇವು ಹಳ್ಳಿ, ಭೀಮಣ್ಣ ರಸ್ತಾಪುರ್, ತಮ್ಮಣ್ಣ ಜಾಗಿದರ್, ಮಲ್ಲಣ್ಣ ಚನ್ನೂರು, ವಿಜಯ್ ಕುಮಾರ್ ದೊಡ್ಮನಿ, ಮಲ್ಲಿಕಾರ್ಜುನ್ ಮರಂಕಲ್, ಮರಿಯಪ್ಪ ಹಲಗೇರಿ, ಶರಣಪ್ಪ ಹಾಲಿಗೇರಿ ಹಾಗೂ ರೈತ ಮಹಿಳಾ ಮುಖಂಡರಾದ ಹಳ್ಳಮ್ಮ ದೋರನಹಳ್ಳಿ, ರೇಣುಕಾ ಎಂ., ದೇವಮ್ಮ, ನಾಗಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.