ಯಾದಗಿರಿ: 2017-2018ನೇ ಸಾಲಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ಆರು ತಿಂಗಳ ಮಾಸಿಕ ಗೌರವಧನ ಲೆಕ್ಕಾಧಿಕಾರಿಗಳ ತಪ್ಪಿನಿಂದ ವ್ಯಪಗತಗೊಂಡಿರುವ ಗಂಭೀರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಜನ ಆಕ್ರೋಶ ಪತ್ರಿಕೆಗೆ ಮಾಹಿತಿ ನೀಡಿದ ಮೂಲಗಳ ಪ್ರಕಾರ, ಸುಮಾರು 2367 ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೆ ಸೇರಬೇಕಿದ್ದ ಒಟ್ಟು ₹1,49,37,300 (ಒಂದು ಕೋಟಿ ನಲವತ್ತೊಂಬತ್ತು ಲಕ್ಷ ಮೂವತ್ತೇಳು ಸಾವಿರ ಮೂರು ನೂರು ರೂಪಾಯಿ) ಗೌರವಧನವನ್ನು ಅದೇ ಸಾಲಿನಲ್ಲಿ ಯಾದಗಿರಿ ಜಿಲ್ಲಾ ಪಂಚಾಯತಿಗೆ ಜಮೆ ಮಾಡಲಾಗಿತ್ತು. ಆದರೆ ಲೆಕ್ಕಾಧಿಕಾರಿಗಳ ನಿರ್ಲಕ್ಷ್ಯದಿಂದ ಈ ಮೊತ್ತವನ್ನು ಜಿಲ್ಲಾ ಪಂಚಾಯತಿಯ ನಿಧಿ-2 ಖಾತೆಗೆ ಜಮೆ ಮಾಡಲಾಗಿದ್ದು, ನಂತರ ಅದು ವ್ಯಪಗತಗೊಂಡಿದೆ.
ಜಿಲ್ಲೆಯಲ್ಲಿ ಅಂದಿನ ಅವಧಿಯಲ್ಲಿ 123 ಗ್ರಾಮ ಪಂಚಾಯತಿಗಳು ಇದ್ದು, 123 ಅಧ್ಯಕ್ಷರು, 123 ಉಪಾಧ್ಯಕ್ಷರು ಹಾಗೂ 2121 ಸದಸ್ಯರು ಸೇರಿ ಒಟ್ಟು 2367 ಜನರಿಗೆ ಈ ಆರು ತಿಂಗಳ ಗೌರವಧನ ಪಾವತಿಯಾಗಬೇಕಿತ್ತು. ಆದರೆ ಈ ಮೊತ್ತ ಇಂದಿನವರೆಗೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ದೊರಕಿಲ್ಲ ಎಂಬುದು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಸಂಬಂಧಿತ ಮೂಲಗಳ ಪ್ರಕಾರ, ಈ ಮೊತ್ತ ಸರ್ಕಾರಕ್ಕೆ ಮರಳಿರಬಹುದಾಗಿಯೂ ಅಥವಾ ಬೇರೆ ಉದ್ದೇಶಗಳಿಗೆ ಬಳಕೆಯಾಗಿರಬಹುದಾಗಿಯೂ ಅನುಮಾನ ವ್ಯಕ್ತವಾಗಿದೆ. ಹಣವನ್ನು ಮರಳಿ ಒದಗಿಸಲು 2022ರಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದರೂ, ಅದು ಕೇವಲ ಕಾಟಾಚಾರದ ಕ್ರಮವೆಂಬ ಅನುಮಾನಗಳು ವ್ಯಕ್ತವಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ಮಾಹಿತಿದಾರರೊಬ್ಬರು, “ಜನಪ್ರತಿನಿಧಿಗಳ ಶಾಸನಬದ್ದ ಹಕ್ಕುಗಳನ್ನು ಯಾದಗಿರಿ ಜಿಲ್ಲಾ ಪಂಚಾಯತಿ ದಾರುಣವಾಗಿ ಹನನ ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ಗೌರವಧನವನ್ನು ಬಡ್ಡಿ ಸಮೇತ ಪಾವತಿಸಬೇಕು. ಆದರೆ ಈ ಬಗ್ಗೆ ಕೇಳುವವರೇ ಇಲ್ಲದಿರುವುದು ವಿಷಾದನೀಯ” ಎಂದು ಹೇಳಿದ್ದಾರೆ.
ಇನ್ನೊಬ್ಬರು ಪ್ರತಿಕ್ರಿಯಿಸುತ್ತಾ, “ಬಹುತೇಕ ಗ್ರಾಮ ಪಂಚಾಯತ್ ಸದಸ್ಯರಿಗೆ ಈ ವಿಷಯವೇ ಗೊತ್ತಿಲ್ಲ. ಗೊತ್ತಿದ್ದರೂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದು ಸಣ್ಣ ಮೊತ್ತವಲ್ಲ; ಹಕ್ಕಿನ ಉಲ್ಲಂಘನೆಯಾಗಿದೆ. ಸರ್ಕಾರ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಓರಾಡಿಯಾ ಅವರನ್ನು ಸಂಪರ್ಕಿಸಿದಾಗ, “ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.
ಸುಮಾರು 9 ವರ್ಷಗಳಿಂದ ಈ ಪ್ರಕರಣ ನಿರ್ಲಕ್ಷ್ಯಕ್ಕೊಳಗಾಗಿರುವುದು ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿದ್ದು, ಜನಪ್ರತಿನಿಧಿಗಳ ಹಕ್ಕುಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.
ಈ ಘಟನೆಯಿಂದ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಲಕ್ಷ್ಮೀಕಾಂತ ನಾಯಕ(9845968164)