ಎಸ್‌ಪಿ ಗ್ರೌಂಡ್‌ನಲ್ಲಿ ಸ್ಮರಣಾರ್ಥಕ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
ಸುರಪುರ: ನಗರದ ಎಸ್‌ಪಿ ಗ್ರೌಂಡ್‌ನಲ್ಲಿ ನಮ್ಮ ಮನೆತನದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯಾಗಿರುವ ಶ್ರೀ ರಾಜಾ ವೆಂಕಟಪ್ಪ ನಾಯಕ, ಶ್ರೀ ರಾಜಾ ಶ್ರೀರಾಮ ನಾಯಕ ಹಾಗೂ ಶ್ರೀ ರಾಜಾ ರೂಪ ಕುಮಾರ ನಾಯಕ (ಬಂಟಿ ಧಣಿ) ಅವರ ಸ್ಮರಣಾರ್ಥವಾಗಿ ಆಯೋಜಿಸಿರುವ ಒಪನ್ ಹಾರ್ಡ್ ಟೆನ್ನಿಸ್ ಬಾಲ್ RKN ಕ್ರಿಕೆಟ್ ಟೂರ್ನ್‌ಮೆಂಟ್ ಅನ್ನು ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜ ವೇಣುಗೋಪಾಲ ನಾಯಕ ಅವರು ಇಂದು ಅಧಿಕೃತವಾಗಿ ಉದ್ಘಾಟಿಸಿ ಚಾಲನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ರಾಜ ವೇಣುಗೋಪಾಲ ನಾಯಕ ಅವರು ಮಾತನಾಡಿ, ಕ್ರೀಡಾಕೂಟಗಳು ಯುವಕರಲ್ಲಿ ಶಿಸ್ತು, ಸ್ನೇಹಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಇಂತಹ ಕ್ರೀಡಾ ಚಟುವಟಿಕೆಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭಾವಂತ ಯುವಕರಿಗೆ ಉತ್ತಮ ವೇದಿಕೆಯಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥಾನದ ಯುವ ನಾಯಕ ರಾಜಾ ಲಕ್ಷ್ಮಿನಾರಾಯಣ ನಾಯಕ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು, ಯುವ ನಾಯಕರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು, ಟೂರ್ನ್‌ಮೆಂಟ್ ಯಶಸ್ಸಿಗೆ ಶುಭ ಹಾರೈಸಿದರು.