ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಬಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಮಟ್ಟಿ ಎಂಬ ಪುಟ್ಟ ಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದ ಘಟನೆ, ಗ್ರಾಮವನ್ನು ಬೆಚ್ಚಿಬೀಳಿಸಿದೆ. ದಾಯಾದಿಗಳ ನಡುವೆ ನಡೆದಿದ್ದ ಆಸ್ತಿ ವಿವಾದ ಕೊನೆಗೆ ಬರ್ಭರ ಹತ್ಯೆಯಲ್ಲಿ ಅಂತ್ಯಗೊಂಡಿದೆ.
ಪರಮೇಶ ಗಿಂಡಿ (27)… ಜೀವನದ ಹಾದಿಯಲ್ಲಿ ಇನ್ನೂ ಮುಂದೆ ಸಾಗಬೇಕಿದ್ದ ಯುವಕ. ಆದರೆ ದಾಯಾದಿಗಳ ಕೋಪ, ದ್ವೇಷ ಮತ್ತು ಲಾಲಸೆ ಅವನ ಬದುಕನ್ನೇ ಕಸಿದುಕೊಂಡಿದೆ.
ಚಿಗಪ್ಪ-ದೊಡಪ್ಪನ ಮಕ್ಕಳಾದ ದಾಯಾದಿಗಳ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ನಡೆದಿದ್ದ ವಿವಾದ ನ್ಯಾಯಾಲಯದವರೆಗೆ ಹೋಗಿತ್ತು. ನ್ಯಾಯಾಲಯವು ಪಾಲು ವಂಚಿತರಿಗೆ ಅನುಕೂಲಕರ ತೀರ್ಪು ನೀಡಿದ ಬಳಿಕ ಜಮೀನು ಹಸ್ತಾಂತರವೂ ನಡೆದಿದೆ. ಆದರೆ ವರ್ಷಗಳ ಕಾಲ ಜಮೀನನ್ನು ಸಾಗುವಳಿ ಮಾಡುತ್ತಿದ್ದವರು “ಸಾಗುವಾಣಿ ಮರಗಳು ನಮ್ಮವು” ಎಂದು ಒತ್ತಾಯಿಸಿದಾಗ ಮತ್ತೆ ಜಗಳ ಚಿಗುರಿತು.
ಈ ಜಗಳ ಮಾತಿನ ಮಟ್ಟದಲ್ಲೇ ನಿಲ್ಲಲಿಲ್ಲ… ರಕ್ತಪಾತದ ಹಾದಿ ಹಿಡಿದಿತ್ತು.
ನಿನ್ನೆ (ಮಾ.30) ರಾತ್ರಿ, ಏಕಾಏಕಿ ಹತ್ತಾರು ಜನರ ಗುಂಪು ಪರಮೇಶ ಮತ್ತು ಅವನ ಸಹೋದರ ರೇವಣಸಿದ್ದ ಗಿಂಡಿ ಮೇಲೆ ದಾಳಿ ನಡೆಸಿತು. ತಲವಾರ, ಭರ್ಚಿ ಮುಂತಾದ ಮಾರಕಾಸ್ತ್ರಗಳನ್ನು ಹಿಡಿದು ಬಂದ ದಂಡು, ಪೂರ್ವನಿಯೋಜಿತ ಸಂಚಿನೊಂದಿಗೆ ದಾಳಿ ಮಾಡಿದಂತೆ ಕಾಣುತ್ತಿದೆ.
ಮೊದಲು ರೇವಣಸಿದ್ದನಿಗೆ ಭರ್ಚಿಯಿಂದ ತಿವಿದು ಗಾಯಗೊಳಿಸಲಾಯಿತು. ಆತ ತಪ್ಪಿಸಿಕೊಳ್ಳುವ ಮುನ್ನವೇ ಪರಿಸ್ಥಿತಿ ನಿಯಂತ್ರಣ ತಪ್ಪಿತು. ನಂತರ ದುಷ್ಕರ್ಮಿಗಳು ಪರಮೇಶನ ಮೇಲೆ ಮುಗಿಬಿದ್ದರು. ನೆಲಕ್ಕೆ ಬಿದ್ದ ಅವನ ಮೇಲೆ ಕಲ್ಲುಗಳಿಂದ ತಲೆ ಮತ್ತು ದೇಹವನ್ನು ಜಜ್ಜಿ ಬರ್ಭರವಾಗಿ ಕೊಲೆಗೈದರು. ಪ್ರತಿದಾಳಿ ಮಾಡಲು ಅವಕಾಶವೇ ಸಿಗದಂತೆ ದಾಳಿ ನಡೆದಿತ್ತು.
ಒಂದು ಕ್ಷಣ… ಒಂದು ಜಗಳ… ಒಂದು ಜೀವ…
ಎಲ್ಲವೂ ಕ್ಷಣದಲ್ಲಿ ಮುಗಿದುಹೋಯಿತು.
ಗಾಯಗೊಂಡ ರೇವಣಸಿದ್ದನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪರಮೇಶ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.
ಸಾವಿರ ಮತದಾರರಿರುವ ಆ ಪುಟ್ಟ ಹಳ್ಳಿಯಲ್ಲಿ ಬಹುತೇಕರು ಬಂಧುಗಳು, ಸೋದರರು. ಅಲ್ಲಿ ನಡೆದ ಈ ಘಟನೆ, “ಸಂಬಂಧಗಳು ಉಳಿಯಲಿಲ್ಲ, ಕೋಪ ಗೆದ್ದಿತು” ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.
ಮಗನ ಶವದ ಮುಂದೆ ತಾಯಿ ಅಳುವ ದೃಶ್ಯ ಕಣ್ಣೀರು ತರಿಸುವಂತಿದೆ. ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಘಟನಾ ಸ್ಥಳಕ್ಕೆ ಹುಣಸಗಿ ವೃತ್ತ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುರಪುರ ಉಪವಿಭಾಗದ ಡಿವೈಎಸ್ಪಿ ಜಾವೇದ್ ಇನಾಂದಾರ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಕೆಂಬಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ನಶ್ವರವಾದ ಆಸ್ತಿ…
ಕ್ಷಣಿಕ ಕೋಪ…
ಇವುಗಳಿಗಾಗಿ ಮನುಷ್ಯನು ಮಾನವೀಯತೆಯನ್ನು ಮರೆತರೆ, ಅಂತಿಮ ಫಲಿತಾಂಶ ಇದೇ…
ಪ್ರೀತಿ, ಮಾತುಕತೆಗಳಿಂದ ಬಗೆಹರಿಯಬಹುದಾದ ವಿವಾದ, ಕೊಲೆವರೆಗೆ ತಲುಪಿರುವುದು ಸಮಾಜಕ್ಕೆ ಎಚ್ಚರಿಕೆಯ ಘಂಟೆಯಾಗಿದೆ.