Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಮದ್ಯದ ನಶೆಯಲ್ಲಿ ಮಿತ್ರನ ಹತ್ಯೆ: ಕೆಂಬಾವಿ ಗುತ್ತಿಬಸವಣ್ಣ ವೃತ್ತದ ಬಳಿ ಘೋರ ಘಟನೆ

ಸುರಪುರ:ಕೆಂಬಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಬ್ಬರ ಮಧ್ಯೆ ಜಗಳ ಸಂಭವಿಸಿ, ಒಬ್ಬ ವ್ಯಕ್ತಿ ಹತನಾಗಿರುವುದು ವರದಿಯಾಗಿದೆ. ಅಂದರೆ, ಇಬ್ಬರು ವ್ಯಕ್ತಿಗಳು ಕುಡಿತದ ಅಮಲಿನಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದು, ಈ ಸಂಘರ್ಷದಲ್ಲಿ ಒಬ್ಬನು ಮೃತಪಟ್ಟಿದ್ದಾನೆ.

ಸಾಯಂಕಾಲ ಇಬ್ಬರೂ ಯಥೇಚ್ಛವಾಗಿ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಅವರ ಮಧ್ಯೆ ಯಾವುದೋ ಕಾರಣಕ್ಕೆ ವಾಗ್ವಾದ ಉಂಟಾಗಿದೆ. ಈ ವಾಗ್ವಾದವು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ, ಒಬ್ಬನು ನೀಡಿದ ಬಲವಾದ ಹೊಡೆತಕ್ಕೆ ಇನ್ನೊಬ್ಬನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೆ, ತಾನು ಹೊಡೆದ ಹೊಡೆತಕ್ಕೆ ತನ್ನ ಸ್ನೇಹಿತ ಮೃತಪಟ್ಟಿದ್ದಾನೆ ಎಂಬ ವಿಷಯ ಹೊಡೆದವನಿಗೆ ತಿಳಿದಿರಲಿಲ್ಲ. ಪೊಲೀಸರು ಆತನನ್ನು ಬಂಧಿಸಿದಾಗಲೇ ಈ ವಿಷಯ ಅರಿವಿಗೆ ಬಂದಿದೆ.

ತಮ್ಮಿಬ್ಬರ ಮಧ್ಯೆ ಕುಡಿತದ ಅಮಲಿನಲ್ಲಿ ಜಗಳ ನಡೆದಿದ್ದು ನಿಜ, ಆದರೆ ತನ್ನ ಹೊಡೆತಕ್ಕೆ ಆತ ಸತ್ತಿರುವುದು ತನಗೆ ತಿಳಿದಿಲ್ಲ ಎಂದು ಆತ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ಎಂ.ಎಲ್.ಸಿ (MLC) ಮಾಡುವ ಸಂದರ್ಭದಲ್ಲಿ ಇದು ಹೊಡೆತದಿಂದ ಸಂಭವಿಸಿದ ಸಾವು ಎಂದು ದೃಢಪಟ್ಟಾಗ ಕೊಲೆಯ ವಿಷಯ ಬಯಲಿಗೆ ಬಂದಿದೆ. ಮದ್ಯಪಾನದ ಮತ್ತಿನಲ್ಲಿ ಮನುಷ್ಯನಿಗೆ ತಾನೇನು ಮಾಡುತ್ತಿದ್ದೇನೆ ಎಂಬ ಅರಿವಿರುವುದಿಲ್ಲ ಮತ್ತು ಮನುಷ್ಯ ಮೃಗವಾಗುತ್ತಾನೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಮೃತ ಮತ್ತು ಆರೋಪಿ ಇಬ್ಬರ ಹೆಸರೂ ಬಸನಗೌಡ ಎಂದಾಗಿದ್ದು, ಇವರಿಬ್ಬರೂ ಟ್ರಕ್ ಚಾಲಕರೆಂದು ತಿಳಿದುಬಂದಿದೆ. ಕೆಂಬಾವಿ ಪಟ್ಟಣದ ಗುತ್ತಿಬಸವಣ್ಣ ವೃತ್ತದ ಹತ್ತಿರ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪೃಥ್ವಿಕ್ ಶಂಕರ್ ಅವರು ಸ್ಥಳಕ್ಕೆ ಧಾವಿಸಿ, ಪ್ರಾಥಮಿಕ ತನಿಖೆ ನಡೆಸಿ ಆರೋಪಿಯನ್ನು ಕೂಡಲೇ ಬಂಧಿಸಿದ್ದಾರೆ.

ಸುಮಾರು 30 ವರ್ಷ ಪ್ರಾಯದ ಇವರಿಬ್ಬರೂ ಕಂಕರ್ ಲಾರಿಗಳ ಚಾಲಕರಾಗಿದ್ದು, ಕೆಲಸದ ವಿಷಯವಾಗಿ ಇವರ ಮಧ್ಯೆ ಜಗಳ ಉಂಟಾಗಿತ್ತು ಎಂದು ಎಸ್‌ಪಿ ಪೃಥ್ವಿಕ್ ಶಂಕರ್ ಮಾಹಿತಿ ನೀಡಿದ್ದಾರೆ. ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಕಾಶೀನಾಥ ಮತ್ತು ಸಚಿನ್ ಎಂಬ ಇನ್ನಿಬ್ಬರು ಚಾಲಕರು, ಕೆಳಗೆ ಬಿದ್ದಿದ್ದ ಬಸನಗೌಡನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಬಸನಗೌಡ ಮೃತಪಟ್ಟಿರುವುದು ಖಚಿತವಾಗಿದೆ.

ಕುಡಿತದ ಅಮಲಿನಲ್ಲಿ ನಡೆದ ಈ ಹೊಡೆದಾಟದಲ್ಲಿ ಒಬ್ಬ ಬಸನಗೌಡನ ಏಟಿಗೆ ಇನ್ನೊಬ್ಬ ಬಸನಗೌಡ ಪ್ರಾಣ ಕಳೆದುಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ಎಂ.ಎಲ್.ಸಿ (MLC) ಸಂದರ್ಭದಲ್ಲಿ ಇದು ಹೊಡೆದಾಟದಿಂದ ಸಂಭವಿಸಿದ ಸಾವು ಎಂದು ತಿಳಿದುಬಂದಿದೆ. ಕೂಡಲೇ ಕೆಂಬಾವಿ ಪೊಲೀಸ್ ಠಾಣೆಯ ಪಿ.ಎಸ್.ಐ ಅವರು ಪ್ರಾಥಮಿಕ ವಿಚಾರಣೆ ನಡೆಸಿದಾಗ, ಇದು ಮದ್ಯದ ಅಮಲಿನಲ್ಲಿ ನಡೆದ ಕೊಲೆ ಎಂಬುದು ದೃಢಪಟ್ಟಿದೆ. ಸದ್ಯ ಪಿ.ಎಸ್.ಐ ಅವರು ಆರೋಪಿ ಬಸನಗೌಡನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಘಟನೆಯು ಕೆಂಬಾವಿ ಪಟ್ಟಣದ ಗುತ್ತಿಬಸವಣ್ಣ ವೃತ್ತದ ಸಮೀಪವಿರುವ ಹಳೆ ಜಟ್ಟಿಂಗೇಶ್ವರ ಸ್ಟೋನ್ ಕ್ರಶರ್ ಹತ್ತಿರ ನಡೆದಿದೆ. ಮೃತಪಟ್ಟ ಬಸನಗೌಡ ಕಳೆದ ಹತ್ತು ದಿನಗಳಿಂದಷ್ಟೇ ಇಲ್ಲಿ ಲಾರಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮೃತ ಬಸನಗೌಡನ ಪತ್ನಿ ನೀಡಿದ ದೂರಿನನ್ವಯ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ತಿಳಿಸಿದ್ದಾರೆ. ಸದ್ಯ ಆರೋಪಿ ಬಸನಗೌಡ ಪೊಲೀಸ್ ವಶದಲ್ಲಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಮೃತ ಬಸನಗೌಡನ ಪತ್ನಿ ನೀಡಿದ ದೂರಿನಲ್ಲಿ ಶರಣಗೌಡ ಎಂಬುವವರ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಇವರು ಜಗಳಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಶರಣಗೌಡ ಅವರು ಸದರಿ ಸ್ಟೋನ್ ಕ್ರಷರ್‌ನ ಮ್ಯಾನೇಜರ್ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳದಲ್ಲಿ ಸಚಿನ್, ಕಾಶಿನಾಥ್ ಹಾಗೂ ಮ್ಯಾನೇಜರ್ ಶರಣಗೌಡ ಇದ್ದರೂ ಸಹ ಬಸನಗೌಡನ ಮೇಲಿನ ಹಲ್ಲೆಯನ್ನು ತಡೆಯಲು ಏಕೆ ಮುಂದಾಗಲಿಲ್ಲ? ಅಸಲಿಗೆ ಅಲ್ಲಿ ನಡೆದಿದ್ದೇನು ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.

ಆಸ್ಪತ್ರೆಯ ಮೂಲಗಳ ಪ್ರಕಾರ, ಬಲವಾದ ಒದೆತದಿಂದಾಗಿ ಬಸನಗೌಡನ ಸಾವು ಸಂಭವಿಸಿದೆ ಎನ್ನಲಾಗಿದೆ. ಆದರೆ, ಹಲ್ಲೆ ನಡೆಸಿದ ಬಸನಗೌಡನಿಗೆ ತನ್ನ ಗೆಳೆಯ ಮೃತಪಟ್ಟ ಸಂಗತಿಯೇ ತಿಳಿದಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತೀವ್ರ ನಶೆಯಲ್ಲಿದ್ದ ಇವರಿಬ್ಬರ ಮಧ್ಯೆ ಜಗಳಕ್ಕೆ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ. ಪ್ರಜ್ಞಾಹೀನ ಸ್ಥಿತಿಗೆ ತಲುಪುವಷ್ಟು ಕುಡಿದ ವ್ಯಕ್ತಿಗಳ ಮಧ್ಯೆ ಅಷ್ಟೊಂದು ಬಲವಾದ ಹೊಡೆದಾಟ ಸಂಭವಿಸಲು ಸಾಧ್ಯವೇ? ಮತ್ತು ಆರೋಪಿಯ ಹೊಡೆತ ಮೃತ ಬಸನಗೌಡನ ದೇಹದ ಯಾವ ಭಾಗಕ್ಕೆ ತಗುಲಿದೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಒಂದು ವೇಳೆ ಮ್ಯಾನೇಜರ್ ಶರಣಗೌಡ ಜಗಳಕ್ಕೆ ಪ್ರಚೋದನೆ ನೀಡಿದ್ದು ನಿಜವೇ ಆದಲ್ಲಿ, ಆ ಜಗಳ ಉದ್ಭವಿಸಲು ಮೂಲ ಕಾರಣವೇನು ಎಂಬುದು ಕುತೂಹಲ ಮೂಡಿಸಿದೆ.

ಯಾದಗಿರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಂತಿದ್ದು, ಸರಣಿ ಅಪರಾಧಗಳು ಸಂಭವಿಸುತ್ತಿವೆ. ಅಪಘಾತ ಮತ್ತು ಮರಣಗಳ ಸಂಖ್ಯೆಗೂ ಮಿತಿಯಿಲ್ಲದಂತಾಗಿದೆ. ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ, ಜೂಜು, ಮಟ್ಕಾ ಮತ್ತು ಅಕ್ರಮ ಮರಳು ಸಾಗಾಣಿಕೆ ದಂದೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಜಿಲ್ಲೆಯು ಭ್ರಷ್ಟರ ಪಾಲಿನ ಸ್ವರ್ಗವಾಗಿದ್ದು, 'ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ' ಎಂಬಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹೆಸರಿಗಷ್ಟೇ ಇದ್ದು, ಜಿಲ್ಲೆ ಅರಾಜಕತೆಗೆ ಒಳಗಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಕಾರ್ಯಾಂಗವು ಜನಪ್ರತಿನಿಧಿಗಳ ಶಿಫಾರಸ್ಸು ಮತ್ತು ಹಸ್ತಕ್ಷೇಪಕ್ಕೆ ಒಳಗಾಗದೆ, ನಿಯಮಾನುಸಾರ ಕರ್ತವ್ಯ ನಿರ್ವಹಿಸಿದರೆ ಮಾತ್ರ ಜನಸಾಮಾನ್ಯರು ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

 

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗನ ಕೊಲೆಯ ಸೇಡು: ರಣಚಂಡಿಯಾದ ಹೆತ್ತವಳು! ರಕ್ತಕ್ಕೆ ರಕ್ತವೆಂದು 12 ವರ್ಷಗಳ ಬಳಿಕ ಮುಹೂರ್ತ ಇಟ್ಟ ತಾಯಿ!₹281.48 ಕೋಟಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಆರೋಪ; ಸರ್ಕಾರದ ತನಿಖೆಗೆ ಆಗ್ರಹಫ್ರೀಡಂ ಹಬ್ಬದಲ್ಲಿ ‘ಮೋದಿ ಮೋದಿ’ ಘೋಷಣೆ; ಡಿಕೆಶಿ ಮಾತಿನಲ್ಲೇ ಜನರಿಗೆ ಟಾಂಗ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ದಂಡಿನ ಆಯ್ಕೆ ಮಾಡುವಂತೆ ಸಿದ್ದು ತುಮಕೂರು ಆಗ್ರಹನಕಲಿ ಎನ್‌ಕೌಂಟರ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ಮನವಿಹಳಿಸಗರ ಸರ್ಕಾರಿ ಶಾಲೆಯ ದುಸ್ಥಿತಿ: ಪುಟಾಣಿಗಳ ಜೀವದೊಂದಿಗೆ ಚೆಲ್ಲಾಟ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪದುಗೃಹ ಸಚಿವರ ಘೋಷಣೆಗೆ ಸವಾಲೇ? ಶಹಾಪುರದಲ್ಲಿ ಮತ್ತೆ ಜೋರಾದ ಅಕ್ರಮ ಮರಳು ಸಾಗಾಟಒಂದು ವಾರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ: ಇಲ್ಲದಿದ್ದರೆ ಬೃಹತ್ ಪ್ರತಿಭಟನೆ – ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆಕೆನಾಲ್ ಒಡೆದು ಸಾವಿರಾರು ಲೀಟರ್ ನೀರು ಪೋಲು: ರೈತರ ಜಮೀನು ಜಲಾವೃತ, ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪನಾರಾಯಣಪುರ ಬಲದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ: ತಕ್ಷಣ ನಿರ್ವಹಣೆಗೆ ರೈತ ಸಂಘ ಆಗ್ರಹ