ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನೀಟ್ ಪರೀಕ್ಷೆಯನ್ನು ರದ್ದು ಮಾಡಿರುವುದರಿಂದ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಪರ ಕೋರ್ಸ್ ಗಳ ಸೀಟು ಹಂಚಿಕೆ ವಿಳಂಬವಾಗುವ ಸಾಧ್ಯತೆ ಇದೆ.
ರಾಜ್ಯದ 3.31 ಲಕ್ಷ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಬರೆದಿದ್ದಾರೆ. ಅದೇ ರೀತಿ ರಾಜ್ಯದ 1.45 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದಾರೆ. ವೈದ್ಯಕೀಯದಲ್ಲಿ ರಾಜ್ಯ ಕೋಟಾದ 10,559 ಸೀಟುಗಳು ಲಭ್ಯವಿವೆ. ನೀಟ್ ಅರ್ಹತಾ ಪಟ್ಟಿ ಆಧಾರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸೀಟುಗಳನ್ನು ಹಂಚಿಕೆ ಮಾಡುತ್ತದೆ. ವೈದ್ಯಕೀಯ ಸೀಟುಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ಬಳಿಕ ಸಿಇಟಿ ಅರ್ಹತಾ ಪಟ್ಟಿಯ ಪ್ರಕಾರ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ನಡೆಸಲಾಗುವುದು. ಈಗ ನೀಟ್ ಪರೀಕ್ಷೆ ರದ್ದಾಗಿರುವುದರಿಂದ ಸಿಇಟಿ ಪ್ರಕ್ರಿಯೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಪ್ರತ್ಯೇಕ ಕೌನ್ಸೆಲಿಂಗ್ ನಡೆಸುವ ಬಗ್ಗೆಯೂ ಕೆಎ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.