ಬೆಳಗಾವಿ, ಅಕ್ಟೋಬರ್ 23: ಮಾಂಜಾ ದಾರಕ್ಕೆ ಸಿಲುಕಿ ಗಾಯಗೊಂಡು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದ ಬೆನ್ನಲ್ಲೇ ಬೆಳಗಾವಿಯಲ್ಲೂ ಆಡಳಿತ ಎಚ್ಚೆತ್ತುಕೊಂಡಿದೆ. ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್ಪಿ ರಾಮರಾಜನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಾಂಜಾ ದಾರ ಬಳಕೆಯಿಂದ ಉಂಟಾಗುತ್ತಿರುವ ಅಪಾಯಗಳ ಕುರಿತು ಎಚ್ಚರಿಕೆ ನೀಡಿದ ಅವರು, ಇತ್ತೀಚೆಗೆ 19 ವರ್ಷದ ಯುವಕನೊಬ್ಬ ಮಾಂಜಾ ದಾರಕ್ಕೆ ಬಲಿಯಾದ ಘಟನೆ ಬೆನ್ನಲ್ಲೇ, ಮಾಂಜಾ ದಾರದ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದಸರಾ ಸಂದರ್ಭದಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ಹೆಚ್ಚು. ಆದರೆ ಮಾಂಜಾ ದಾರವನ್ನು ಬಳಸುವುದರಿಂದ ಬೈಕ್ ಸವಾರರು, ಸೈಕಲ್ ಸವಾರರು ಸೇರಿದಂತೆ ಪಾದಚಾರಿಗಳ ಕುತ್ತಿಗೆಗೆ ಗಂಭೀರ ಗಾಯಗಳಾಗಿ, ಕೆಲವೊಮ್ಮೆ ಪ್ರಾಣಾಪಾಯವೂ ಸಂಭವಿಸುತ್ತದೆ. ಇಂತಹ ಮಾರಣಾಂತಿಕ ದಾರಗಳ ಮಾರಾಟ ಕಂಡುಬಂದರೆ ವ್ಯಾಪಾರಿಗಳ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರು ಮಾಂಜಾ ದಾರವನ್ನು ಖರೀದಿಸಬಾರದು ಮತ್ತು ಬಳಸಬಾರದು ಎಂದು ಅವರು ಸೂಚನೆ ನೀಡಿದ್ದಾರೆ. ಕಾನೂನುಬದ್ಧವಾದ ಸಾಮಾನ್ಯ ದಾರಗಳನ್ನು ಬಳಸಿ ಗಾಳಿಪಟ ಹಾರಿಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಿಷೇಧಿತ ಮಾಂಜಾ ದಾರ ಬಳಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ