ಯಾದಗಿರಿ: ಪ್ರತಿಷ್ಠಿತ ಯೋಜನೆಯಡಿಯಲ್ಲಿ ಯಾದಗಿರಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳ ಗುರಿಯನ್ನು ವೃದ್ಧಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ 2012–13ನೇ ಸಾಲಿನಲ್ಲಿ ಪ್ರತಿಷ್ಠಿತ ಯೋಜನೆಯಡಿಯಲ್ಲಿ ಐದು ಶಾಲೆಗಳನ್ನು ಆಯ್ಕೆಮಾಡಿ, ಪರಿಶಿಷ್ಟ ಪಂಗಡದ 22 ಹಾಗೂ ಪರಿಶಿಷ್ಟ ಜಾತಿಯ 35 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಶಿಕ್ಷಣ ಸೌಲಭ್ಯ ಒದಗಿಸಲಾಗುತ್ತಿತ್ತು. ಆದರೆ 2026–27ನೇ ಸಾಲಿನ ವೇಳೆಗೆ ಈ ಯೋಜನೆ ಕೇವಲ ಐದು ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದು, ಅವುಗಳು ಯಾದಗಿರಿ, ಶಹಾಪುರ ಹಾಗೂ ಸುರಪುರ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ.
ಪ್ರಸ್ತುತ ಶಹಾಪುರದಲ್ಲಿ ಮೂರು, ಸುರಪುರದಲ್ಲಿ ಒಂದು ಹಾಗೂ ಯಾದಗಿರಿಯಲ್ಲಿ ಒಂದು ಶಾಲೆ ಮಾತ್ರ ಯೋಜನೆಯ ವ್ಯಾಪ್ತಿಯಲ್ಲಿ ಇರುವುದರಿಂದ, ಹುಣಸಗಿ ಸೇರಿದಂತೆ ಜಿಲ್ಲೆಯ ಇತರೆ ತಾಲ್ಲೂಕುಗಳ ಪ್ರತಿಭಾವಂತ ವಿದ್ಯಾರ್ಥಿಗಳು ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ. ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಸಂಚರಿಸುವುದು ಕಷ್ಟಕರವಾಗಿದ್ದು, ಆರ್ಥಿಕ ಹಾಗೂ ಭೌಗೋಳಿಕ ಕಾರಣಗಳಿಂದ ಅನೇಕ ವಿದ್ಯಾರ್ಥಿಗಳು ಅವಕಾಶ ಕಳೆದುಕೊಳ್ಳುವಂತಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿರುವುದರಿಂದ, ಪ್ರತಿಷ್ಠಿತ ಯೋಜನೆಯ ಅಗತ್ಯತೆ ಇನ್ನಷ್ಟು ಹೆಚ್ಚಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಷ್ಠಿತ ಯೋಜನೆಯಡಿಯಲ್ಲಿ ಪ್ರತಿ ತಾಲ್ಲೂಕಿಗೆ ಕನಿಷ್ಠ ಎರಡು ರಿಂದ ಮೂರು ಶಾಲೆಗಳನ್ನು ಹೆಚ್ಚಿಸಿದಲ್ಲಿ, ಹೆಚ್ಚಿನ ಸಂಖ್ಯೆಯ SC ಮತ್ತು ST ವಿದ್ಯಾರ್ಥಿಗಳಿಗೆ ಶಿಕ್ಷಣದ ಸೌಲಭ್ಯ ದೊರೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸಲ್ಲಿಸಲಾದ ಮನವಿಯಲ್ಲಿ, ಯೋಜನೆಯ ವಿಸ್ತರಣೆ ಮೂಲಕ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಕಾರ್ಯಧ್ಯಕ್ಷ ಲಕ್ಷ್ಮೀಕಾಂತ ನಾಯಕ(ಸಂಪಾದಕರು ಜನ ಆಕ್ರೋಶ ಪತ್ರಿಕೆ) ಅವರು ಆಗ್ರಹಿಸಿದ್ದಾರೆ.