Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಎಸ್‌ಐಆರ್‌ ವಿವಾದ: ಗ್ಯಾನೇಶ ಕುಮಾರ ಪ್ರವಾಸ ದಿಢೀರ್ ಮುಂದೂಡಿಕೆ

ಹೊಸದಿಲ್ಲಿ, ಸೆ. 25 : (ಸಮದರ್ಶಿ ಸುದ್ದಿ) - ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತ ವಿವಾದ ಹಾಗೂ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳ ವರದಿಗಳ ನಡುವೆಯೇ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಉತ್ತರ ಪ್ರದೇಶದ ಮೀರತ್‌ ಮತ್ತು ವಾರಾಣಸಿಯಲ್ಲಿ ಯುವ ಮತದಾರರೊಂದಿಗೆ ನಡೆಸಬೇಕಿದ್ದ ಎರಡು ಪ್ರಮುಖ ಸಂವಾದ ಕಾರ್ಯಕ್ರಮಗಳನ್ನು ಚುನಾವಣಾ ಆಯೋಗ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಮೀರತ್‌ನಲ್ಲಿ ಸೆ.25ರಂದು ಚುನಾವಣಾ ಸಾಕ್ಷರತಾ ಕ್ಲಬ್‌ಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಗ್ಯಾನೇಶ್‌ ಕುಮಾರ್‌ ಭಾಗವಹಿಸಬೇಕಿತ್ತು. ಸೆ.28ರಂದು ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಯುವ ಮತದಾರರೊಂದಿಗೆ ಸಂವಾದ ಕಾರ್ಯಕ್ರಮ ನಿಗದಿಯಾಗಿತ್ತು. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಮೊದಲ ಬಾರಿಗೆ ಮತದಾರರಾಗುತ್ತಿರುವ ಯುವಜನರಿಗೆ ಚುನಾವಣಾ ಪ್ರಕ್ರಿಯೆ, ಮತದಾರರ ನೋಂದಣಿ ಮತ್ತು ಆಯೋಗದ ಕಾರ್ಯವೈಖರಿ ಕುರಿತು ಮಾಹಿತಿ ನೀಡುವುದು ಕಾರ್ಯಕ್ರಮಗಳ ಉದ್ದೇಶವಾಗಿತ್ತು.

ಆದರೆ ಎರಡೂ ಕಾರ್ಯಕ್ರಮಗಳನ್ನು ಈಗ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಎಸ್‌ಐಆರ್‌ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವಿವಾದ ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದರ ನಡುವೆ ಮೀರತ್‌ನಲ್ಲಿ ಗ್ಯಾನೇಶ್‌ ಕುಮಾರ್‌ ಅವರಿಗೆ ಯುವಜನರಿಂದ ಪ್ರತಿಭಟನೆ ಎದುರಾಗುವ ಸಾಧ್ಯತೆಯ ಕುರಿತು ಮಾಹಿತಿ ಬಂದಿತ್ತು ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ಯುವಕರೊಂದಿಗೆ ಸಂವಾದದ ವೇಳೆ ಎಸ್‌ಐಆರ್‌, ಮತದಾರರ ಪಟ್ಟಿಯಿಂದ ಹೆಸರುಗಳ ಕೈಬಿಡುವಿಕೆ ಹಾಗೂ ಆಯೋಗದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ತೀಕ್ಷ್ಣ ಪ್ರಶ್ನೆಗಳು ಎದುರಾಗಬಹುದೆಂಬ ಆತಂಕವಿತ್ತು ಎಂದೂ ವರದಿಯಾಗಿದೆ. ಆದರೆ ಚುನಾವಣಾ ಆಯೋಗವು ಕಾರ್ಯಕ್ರಮ ಮುಂದೂಡಿಕೆಗೆ ವಿವಾದ ಕಾರಣ ಎಂಬುದನ್ನು ನಿರಾಕರಿಸಿದೆ.

ಕಾರ್ಯಕ್ರಮಗಳ ದಿನಾಂಕ ಬದಲಾವಣೆ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಸಭಾಂಗಣಗಳ ಲಭ್ಯತೆ, ಹಿರಿಯ ಅಧಿಕಾರಿಗಳ ವೇಳಾಪಟ್ಟಿ ಹಾಗೂ ಇತರ ಕಾರಣಗಳಿಂದ ಇಂತಹ ಬದಲಾವಣೆಗಳು ನಡೆಯುತ್ತವೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಮೀರತ್‌ ಮತ್ತು ವಾರಾಣಸಿ ಕಾರ್ಯಕ್ರಮಗಳನ್ನು ಮುಂದೂಡುವ ನಿರ್ಧಾರವನ್ನು ಸೆ.21ರಂದೇ ಕೈಗೊಳ್ಳಲಾಗಿತ್ತು ಎಂದೂ ಆಯೋಗ ಹೇಳಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳ ಕುರಿತ ವರದಿಗಳೂ ಮಹತ್ವ ಪಡೆದುಕೊಂಡಿವೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರ ಅವಧಿಯಲ್ಲಿ ಕೈಗೊಂಡ ವಿವಿಧ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರು ಕಳೆದ ಹತ್ತು ತಿಂಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಲಿಖಿತ ಆಕ್ಷೇಪ ದಾಖಲಿಸಿದ್ದಾರೆ ಎಂದು ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹೆಸರು ಕೈಬಿಡುವಿಕೆ ಮತ್ತು ಮರುಸೇರ್ಪಡೆ, ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿನ ಬದಲಾವಣೆಗಳು ಸೇರಿದಂತೆ ಹಲವು ವಿಷಯಗಳಲ್ಲಿ ಈ ಆಕ್ಷೇಪಗಳು ವ್ಯಕ್ತವಾಗಿವೆ. ವಿಶೇಷವಾಗಿ ಹೊಸ ಮತದಾರರ ನೋಂದಣಿಗೆ ಬಳಸುವ ನಮೂನೆ-6ರಲ್ಲಿ ಹಿಂದಿನ ಎಸ್‌ಐಆರ್‌ ಮತದಾರರ ಪಟ್ಟಿಯಲ್ಲಿ ಅರ್ಜಿದಾರ ಅಥವಾ ಅವರ ಪೋಷಕರು ಅಥವಾ ಅಜ್ಜ-ಅಜ್ಜಿಯರ ಹೆಸರು ಇದೆಯೇ ಎಂಬ ಮಾಹಿತಿಯನ್ನು ಕೇಳುವ ಕ್ರಮಕ್ಕೂ ಆಕ್ಷೇಪ ವ್ಯಕ್ತವಾಗಿತ್ತು.

ಎಸ್‌ಐಆರ್‌ ಪ್ರಕ್ರಿಯೆ ಮತ್ತು ಆಯೋಗದೊಳಗಿನ ಈ ಭಿನ್ನಾಭಿಪ್ರಾಯಗಳ ವರದಿಗಳು ಹೊರಬಂದ ನಂತರ ರಾಜಕೀಯ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಗ್ಯಾನೇಶ್‌ ಕುಮಾರ್‌ ಅವರನ್ನು ಆಯ್ಕೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎಂದು ಆರೋಪಿಸಿರುವ ಅವರು, ಆಯೋಗದ ಇತರ ಇಬ್ಬರು ಆಯುಕ್ತರೇ ಹಲವು ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗ್ಯಾನೇಶ್‌ ಕುಮಾರ್‌ ‘ಅಪ್ರೂವರ್‌’ ಆಗಬೇಕು ಎಂದು ಹೇಳಿದ್ದಾರೆ.

ಯುವಜನರ ಸಂಘಟನೆ ಕಾಕ್ರೋಚ್‌ ಜನತಾ ಪಾರ್ಟಿ ಕೂಡ ಗ್ಯಾನೇಶ್‌ ಕುಮಾರ್‌ ರಾಜೀನಾಮೆಗೆ 48 ಗಂಟೆಗಳ ಗಡುವು ನೀಡಿದ್ದು, ರಾಜೀನಾಮೆ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ. ಈ ರಾಜಕೀಯ ಮತ್ತು ಸಾರ್ವಜನಿಕ ಒತ್ತಡದ ನಡುವೆಯೇ ಯುವಜನರೊಂದಿಗೆ ನೇರ ಸಂವಾದ ನಡೆಸಬೇಕಿದ್ದ ಮೀರತ್‌ ಮತ್ತು ವಾರಾಣಸಿ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿರುವುದು ಗಮನ ಸೆಳೆದಿದೆ.

ಮೀರತ್‌ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಪಶ್ಚಿಮ ಉತ್ತರ ಪ್ರದೇಶದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಳ್ಳಬೇಕಿತ್ತು. ವಾರಾಣಸಿಯಲ್ಲಿಯೂ ಯುವಜನರಿಗೆ ಚುನಾವಣಾ ಪ್ರಕ್ರಿಯೆ, ಡಿಜಿಟಲ್‌ ಮತದಾರ ಸೇವೆಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಮಾಹಿತಿ ನೀಡುವುದರೊಂದಿಗೆ ಅವರೊಂದಿಗೆ ನೇರ ಸಂವಾದ ನಡೆಸುವ ಕಾರ್ಯಕ್ರಮ ರೂಪಿಸಲಾಗಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ